ADVERTISEMENT

ಬಿಟ್‌ ಕಾಯಿನ್ ಹಗರಣ: ಸರ್ಕಾರಿ ಜಾಲತಾಣದಿಂದ ₹46 ಕೋಟಿ ದೋಚಿದ್ದ ಹ್ಯಾಕರ್ ಶ್ರೀಕಿ!

ಬಿಟ್‌ ಕಾಯಿನ್ ಹಗರಣ l ತಪ್ಪೊಪ್ಪಿಗೆ ನೀಡಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ

ಸಂತೋಷ ಜಿಗಳಿಕೊಪ್ಪ
Published 29 ಅಕ್ಟೋಬರ್ 2021, 20:57 IST
Last Updated 29 ಅಕ್ಟೋಬರ್ 2021, 20:57 IST
ಶ್ರೀಕೃಷ್ಣ
ಶ್ರೀಕೃಷ್ಣ   

ಬೆಂಗಳೂರು: ‘ಬಿಟ್ ಕಾಯಿನ್’ ಹಗರಣದ ಮೂಲ ಸೂತ್ರದಾರ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ರಾಜ್ಯ ಸರ್ಕಾರದ ಜಾಲತಾಣವನ್ನೇ ಹ್ಯಾಕ್ ಮಾಡಿ ₹ 46 ಕೋಟಿ ದೋಚಿದ್ದನೆಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ಹಿನ್ನೆಲೆ ಕೇಳಿ ದಂಗಾಗಿದ್ದರು. ‘ಅಂತರರಾಷ್ಟ್ರೀಯ ಹ್ಯಾಕರ್’ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ, ಹೊಸ ಆಯಾಮದಲ್ಲೇ ತನಿಖೆ ಮುಂದುವರಿಸಿದ್ದರು.

‘ಬಿಟ್ ಕಾಯಿನ್’ ಅಕ್ರಮದಲ್ಲಿ ಶ್ರೀಕಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆ ಠಾಣೆಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿತ್ತು. ಇದರ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಹಲವು ಹ್ಯಾಂಕಿಂಗ್ ಪ್ರಕರಣಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ADVERTISEMENT

ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್‌ (https://eproc.karnataka.gov.in) ಜಾಲತಾಣ ಹ್ಯಾಕ್ ಬಗ್ಗೆಯೂ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ನೆದರ್ಲೆಂಡ್ಸ್‌ನಲ್ಲಿ ಬಿ.ಎಸ್ಸಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಶ್ರೀಕೃಷ್ಣ, ಸ್ಥಳೀಯ ಸ್ನೇಹಿತರ ಜೊತೆ ಹೆಚ್ಚು ಓಡಾಡುತ್ತಿದ್ದ. ಆತನಿಗೆ ಸುನೀಶ್ ಹೆಗ್ಡೆ, ಹೇಮಂತ್ ಮದ್ದಪ್ಪ ಹಾಗೂ ಇತರರ ಪರಿಚಯವಾಗಿತ್ತು. ಅವರ ಜೊತೆ ಸೇರಿಕೊಂಡು ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್‌ ಜಾಲತಾಣವನ್ನು ಮೂರು ಬಾರಿ (2019ರ ಮೇ ಹಾಗೂ ಜೂನ್‌ನ) ಶ್ರೀಕೃಷ್ಣ ಹ್ಯಾಕ್ ಮಾಡಿದ್ದ. ಒಂದು ಪ್ರಯತ್ನ ವಿಫಲವಾಗಿತ್ತು. ಎರಡು ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಉತ್ತರಾಖಂಡದ ಹಿಮಾಲಯಸ್‌ ಆನಂದ ಸ್ಪಾ ಆ್ಯಂಡ್‌ ರೆಸಾರ್ಟ್‌ನಲ್ಲಿ ಇದ್ದುಕೊಂಡು ಆರೋಪಿ ಈ ಕೃತ್ಯ ಎಸಗಿದ್ದ. ಟೆಂಡರ್‌ಗೆ ಬಿಡ್ ಮಾಡಿದ್ದ ಗುತ್ತಿಗೆದಾರರ ವೈಯಕ್ತಿಕ ಮಾಹಿತಿ ಹಾಗೂ ಅವರು ಬ್ಯಾಂಕ್‌ಗೆ ಪಾವತಿಸಿದ್ದ ಹಣದ ಮಾಹಿತಿಯನ್ನು ಶ್ರೀಕೃಷ್ಣ ಕದ್ದಿದ್ದ. ಇದಕ್ಕಾಗಿ ಆರೋಪಿ, ‘ಎಸ್‌ಕ್ಯೂಎಲ್‌ ಮ್ಯಾಪ್’ ತಂತ್ರಜ್ಞಾನ ಬಳಸಿದ್ದ.’

‘ಜಾಲತಾಣದ ದತ್ತಾಂಶ ಬಳಸಿಕೊಂಡು, ಆರೋಪಿ ಹೇಮಂತ್‌ ಮುದ್ದಪ್ಪ ನೀಡಿದ್ದ ಎರಡು ಖಾತೆಗಳಿಗೆ ಪ್ರತ್ಯೇಕವಾಗಿ ₹ 18 ಕೋಟಿ ಹಾಗೂ ₹ 28 ಕೋಟಿಯನ್ನು ಆರೋಪಿ ವರ್ಗಾವಣೆ ಮಾಡಿದ್ದ. ಅದರಲ್ಲಿ ₹ 2 ಕೋಟಿಯನ್ನು ಅಯೂಬ್ ಎಂಬಾತ ಪಡೆದಿದ್ದ. ಆದರೆ, ಆತ ಯಾರು ಎಂಬುದನ್ನು ಶ್ರೀಕೃಷ್ಣ ಬಾಯ್ಬಿಟ್ಟಿಲ್ಲ’ ಎಂಬ ಸಂಗತಿಯೂ ಆರೋಪ ಪಟ್ಟಿಯಲ್ಲಿದೆ.

‘ಜಾಲತಾಣ ಹ್ಯಾಕ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಇ–ಸಂಗ್ರಹಣಾ ಪೋರ್ಟಲ್‌ ಘಟಕದ ಆರ್ಥಿಕ ಸಲಹೆಗಾರ್ತಿ ಎಸ್‌.ಕೆ. ಶೈಲಜಾ, ಸಿಐಡಿಯ ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು. ಅಕ್ರಮ ವರ್ಗಾವಣೆಯಿಂದ ಸರ್ಕಾರಕ್ಕೆ ₹ 1.05 ಕೋಟಿ ನಷ್ಟವಾಗಿರುವುದಾಗಿ ತಿಳಿಸಿದ್ದರು. ತನಿಖೆ ಕೈಗೊಂಡಾಗಲೇ, ₹ 46 ಕೋಟಿ ಅಕ್ರಮ ವರ್ಗಾವಣೆ ಆಗಿರುವುದಾಗಿ ಗೊತ್ತಾಗಿದೆ. ಇದೇ ಹಣ, ಬಿಟ್ ಕಾಯಿನ್ ಆಗಿ ಪರಿವರ್ತನೆ ಆಗಿರುವ ಅನುಮಾನ ಇದೆ. ಆರೋಪಿ ಸಹ ತನ್ನ ಹೇಳಿಕೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾನೆ’ ಎಂಬ ಮಾಹಿತಿಯೂ ದೋಷಾರೋಪ ಪಟ್ಟಿಯಲ್ಲಿದೆ.

ಇ–ಸಂಗ್ರಹಣಾ ಪೋರ್ಟಲ್‌ ಜಾಲತಾಣ ಹ್ಯಾಕ್ ಪ್ರಕರಣದ ತನಿಖೆಯನ್ನು ಸದ್ಯ ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ವಿಚಾರಣೆ ಸಹ ನಡೆಸಿದ್ದಾರೆ ಎಂಬ ಮಾಹಿತಿಯನ್ನೂ ಸಿಸಿಬಿ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

---

ಏನಿದು ಬಿಟ್‌ಕಾಯಿನ್

ರೂಪಾಯಿ ಹಾಗೂ ಡಾಲರ್‌ಗಳಂತೆಯೇ ‘ಬಿಟ್ ಕಾಯಿನ್ (ಬಿಟಿಸಿ)’ ಕೂಡ ಒಂದು ನಾಣ್ಯ. ಆದರೆ, ಇದು ನಿಗೂಢ ಹಣ (ಕ್ರಿಪ್ಟೋ ಕರೆನ್ಸಿ). ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಅಂಕಿಗಳ ರೂಪದಲ್ಲಷ್ಟೇ ಇದನ್ನು ನಾವು ನೋಡಬಹುದು. 2009ರಲ್ಲಿ ‘ಕ್ರಿಪ್ಟೋಗ್ರಫಿ’ ಎಂಬ ತಂತ್ರಜ್ಞಾನದ ಮೂಲಕ ಈ ಡಿಜಿಟಲ್ ಕರೆನ್ಸಿಯನ್ನು ಸೃಷ್ಟಿಸಲಾಯಿತು. ಬ್ಯಾಂಕ್ ಹಾಗೂ ಇತರೆ ಯಾವುದೇ ಮಧ್ಯವರ್ತಿಗಳಿಲ್ಲದೆ, ಅತಿ ಕಡಿಮೆ ವರ್ಗಾವಣೆ ಶುಲ್ಕದಲ್ಲಿ ವಹಿವಾಟು ನಡೆಸಲು ಬಿಟ್‌ ಕಾಯಿನ್ ಬಳಸಲಾಗುತ್ತದೆ.

ಇಂಥ ಬಿಟ್ ಕಾಯಿನ್‌ಗಳನ್ನು ಬಳಕೆದಾರರೇ ಸೃಷ್ಟಿಸಬೇಕು. ಈ ಪ್ರಕ್ರಿಯೆಗೆ ‘ಮೈನಿಂಗ್’ ಎನ್ನಲಾಗುತ್ತದೆ. ಚಿನ್ನವನ್ನು ಗಣಿಗಾರಿಕೆ ಮಾಡುವಂತೆ ಬಿಟ್ ಕಾಯಿನ್‌ಗಳ ಗಣಿಗಾರಿಕೆಯೂ ನಡೆಯುತ್ತದೆ. ಇದಕ್ಕಾಗಿ ಕಂಪ್ಯೂಟರ್‌ನಲ್ಲಿ ಕೆಲ ಗಣಿತದ ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಇದಕ್ಕೆ ‘ಹ್ಯಾಷ್ ಫಂಕ್ಷನ್’ ಎನ್ನಲಾಗುತ್ತದೆ. ಈ ಹಂತ ಪ್ರವೇಶಿಸಿದರೆ, ಬಿಟ್ ಕಾಯಿನ್ ವ್ಯವಹಾರ ನಡೆಸುವ ಕಂಪನಿ ಜತೆ ಸಂಪರ್ಕ ಸಾಧ್ಯವಾಗುತ್ತದೆ. ಆ ನಂತರ ಕಂಪನಿ ಹಾಗೂ ಗ್ರಾಹಕರ ನಡುವೆ ಬಿಟ್ ಕಾಯಿನ್ ಮಾರಾಟ–ಖರೀದಿಯ ಗೋಪ್ಯ ವ್ಯವಹಾರ ನಡೆಯುತ್ತದೆ.

ಬಿಟ್ ಕಾಯಿನ್ ವ್ಯವಹಾರಕ್ಕೆ ಬಳಕೆದಾರರ ವೈಯಕ್ತಿಕ ವಿವರದ ಅಗತ್ಯವಿಲ್ಲ. ಅನಾಮಿಕರಾಗಿ ವಹಿವಾಟು ನಡೆಸಬಹುದು. ಇದರಿಂದಾಗಿ ಬಿಟ್ ಕಾಯಿನ್ ವ್ಯವಹಾರ ನಡೆಸುವವರನ್ನು ಪತ್ತೆ ಹಚ್ಚುವುದು ತೀರಾ ಕಷ್ಟ. ಯಾವುದೇ ರಾಷ್ಟ್ರದ ವಿದೇಶಾಂಗ ನೀತಿಗಳ, ಬ್ಯಾಂಕಿಂಗ್ ನಿಯಮಗಳ, ಆದಾಯ ತೆರಿಗೆ ಇಲಾಖೆಗಳ ಅಡ್ಡಿ– ಆತಂಕಗಳೂ ಬಿಟ್ ಕಾಯಿನ್‌ಗೆ ಸದ್ಯಕ್ಕಿಲ್ಲ. ಇದೇ ಕಾರಣಕ್ಕೆ, ದಂಧೆಕೋರರಿಗೆ ಬಿಟ್ ಕಾಯಿನ್ ವ್ಯವಹಾರ ಸಲೀಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.