ADVERTISEMENT

ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಜೆ.ಪಿ. ನಡ್ಡಾ ಗೈರು

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 15:49 IST
Last Updated 27 ಡಿಸೆಂಬರ್ 2021, 15:49 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಹುಬ್ಬಳ್ಳಿ: 'ನೂತನ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಳ್ಳುತ್ತಿಲ್ಲ. ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಡಿಸೆಂಬರ್ 28 ಹಾಗೂ 29 ರಂದು ಎರಡು ದಿನ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ.

ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ನಗರಕ್ಕೆ ಬಂದಅರುಣ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದರು.

ADVERTISEMENT

'ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿ ಜಾರಿಯಾಗಿದ್ದು, ಅದನ್ನು ನಾವು ಶಿಸ್ತಿನಿಂದ ಪಾಲಿಸುತ್ತೇವೆ. 600 ಮಂದಿ ಪಾಲ್ಗೊಳ್ಳಬೇಕಿದ್ದ ಕಾರ್ಯಕಾರಿಣಿಗೆ, 300 ಮಂದಿಯಷ್ಟೇ ಪಾಲ್ಗೊಳ್ಳುತ್ತಿದ್ದಾರೆ. ಜೆ.ಪಿ. ನಡ್ಡಾ ಅವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು' ಎಂದರು.

'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಪ್ರಾಮಾಣಿಕ ಹಾಗೂ ಬದ್ಧತೆ ಇರುವ ಮುಖ್ಯಮಂತ್ರಿ. ಯಾವುದೇ ಕಾರಣಕ್ಕೂ ಅವರ ಬದಲಾವಣೆಯಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ಅವರ ನೇತೃತ್ವದಲ್ಲಿಯೇ ನಡೆಯಲಿದೆ' ಎಂದು ಹೇಳಿದರು.

'ಗುತ್ತಿಗೆದಾರರ ಶೇ 40ರಷ್ಟು ಕಮಿಷನ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರ ಪ್ರಾಮಾಣಿಕವಾಗಿದ್ದು, ಕೆಲವು ಅಧಿಕಾರಿಗಳು ಅದರಲ್ಲಿ ಪಾಲ್ಗೊಂಡಿರಬಹುದು. ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ' ಎಂದರು.

'ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಬೆಳಗಾವಿಯಲ್ಲಿ ಸೋಲಲು ಕಾರಣವೇನೆಂದು ತಿಳಿಯಲು ಸಮಿತಿ ರಚನೆ ಮಾಡುತ್ತೇವೆ. ಅದಕ್ಕೆ ಪೂರಕವಾಗಿ ಸ್ಥಳೀಯರ ಅಭಿಪ್ರಾಯ ಸಹ ಸಂಗ್ರಹಿಸಲಾಗುವುದು' ಎಂದು ಹೇಳಿದರು.

'ಬಸವರಾಜ ಬೊಮ್ಮಾಯಿಗೆ ಕೇಂದ್ರ ಸಚಿವರಾಗುವ ಯೋಗವಿದೆ' ಎನ್ನುವ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, 'ಈ ಕುರಿತು ನಿರಾಣಿ ಜೊತೆ ಮಾತನಾಡಿದ್ದೇನೆ. ತನ್ನ ಹೇಳಿಕೆ ತಿರುಚಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.