ADVERTISEMENT

ಬಿಜೆಪಿಯಲ್ಲಿ ಸಂತೋಷ್ ಮೇಲುಗೈ; ವಿಜಯೇಂದ್ರಗೆ ಉಪಾಧ್ಯಕ್ಷ ಸ್ಥಾನಕ್ಕೆ ’ಬಡ್ತಿ‘

ಪಕ್ಷದ ಸಂಘಟನೆಗೆ ಹೊಸಮುಖ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:05 IST
Last Updated 31 ಜುಲೈ 2020, 21:05 IST
ಬಿಜೆಪಿ
ಬಿಜೆಪಿ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಶುಕ್ರವಾರ ಬಿಡುಗಡೆ ಆಗಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಆಪ್ತರಿಗೇ ಸಿಂಹ ಪಾಲು ಲಭಿಸಿದೆ.

ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದಾಗ ವಿವಿಧ ಕಾರಣಗಳಿಗೆ ಮೂಲೆ ಗುಂಪಾಗಿದ್ದವರಿಗೆ ಈ ಬಾರಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಪಕ್ಷದ ಪ್ರಧಾನ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರಿಗೆ ರಾಜ್ಯಘಟಕದ ಉಪಾಧ್ಯಕ್ಷ ಹುದ್ದೆಗೆ ‘ಬಡ್ತಿ’ ನೀಡಿ, ಅವರ ಆಕಾಂಕ್ಷೆಗೆ ಕತ್ತರಿ ಹಾಕಲಾಗಿದೆ.

ಪಕ್ಷದಲ್ಲಿ ಹೆಚ್ಚು ಅಧಿಕಾರವನ್ನು ಹೊಂದಿರುವ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಇಲ್ಲಿಯೂ ಸಂತೋಷ್‌ ಪರ ಗುರುತಿಸಿಕೊಂಡವರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಇದರಿಂದ ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವುದು ಸಂತೋಷ್ ಲೆಕ್ಕಾಚಾರ ಎಂಬ ವ್ಯಾಖ್ಯಾನ ಪಕ್ಷದಲ್ಲಿ ನಡೆದಿದೆ.

ADVERTISEMENT

ಶಾಸಕ ಅರವಿಂದ ಲಿಂಬಾವಳಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಸೇರಿ 10 ಜನರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೊಂದು ಗೌರವದ ಹುದ್ದೆಯಾಗಿದ್ದು, ಹೆಚ್ಚಿನ ಅಧಿಕಾರ ಇರುವುದಿಲ್ಲ ಎಂಬ ವಿಶ್ಲೇಷಣೆಯೂ ನಡೆದಿದೆ.

ಯಡಿಯೂರಪ್ಪ ವಿರೋಧಿ ಬಣದ ಗುರುತಿಸಿಕೊಂಡ ಕಾರಣಕ್ಕೆ ಹಿಂದೆ ಪಕ್ಷದ ಪ್ರಮುಖ ಹುದ್ದೆಗಳನ್ನು ಕಳೆದುಕೊಂಡಿದ್ದ ಹಲವರಿಗೆ ಆಯಕಟ್ಟಿನ ಹುದ್ದೆ ಸಿಕ್ಕಿದೆ. ಈ ಪೈಕಿ ಎಂ.ಬಿ. ಭಾನುಪ್ರಕಾಶ್‌, ಎ.ಎಚ್. ಶಿವಯೋಗಿ ಸ್ವಾಮಿ ಅವರಿಗೆ ಪ್ರಕೋಷ್ಠಗಳ ಸಂಯೋಜಕ ಹುದ್ದೆ ನೀಡಲಾಗಿದೆ. ನಿರ್ಮಲ್‌ ಕುಮಾರ್ ಸುರಾನಾ, ಎಂ.ಬಿ.ನಂದೀಶ್‌, ಸಿದ್ದರಾಜು, ಮಹೇಶ್‌ ಟೆಂಗಿನಕಾಯಿ, ತುಳಸಿ ಮುನಿರಾಜುಗೌಡ, ಕೇಶವಪ್ರಸಾದ್‌ ಇವರಿಗೆ ಈಗ ಅವಕಾಶ ಸಿಕ್ಕಿದ್ದು, ಈ ಎಲ್ಲರೂ ಸಂತೋಷ್‌ ಜತೆ ಗುರುತಿಸಿಕೊಂಡಿರುವ ಪ್ರಮುಖರು ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.