ADVERTISEMENT

ಕರ್ನಾಟಕ ಕಾಂಗ್ರೆಸ್‌ನಲ್ಲಿ ಈಗ ಮನೆಯೊಂದು ಮೂರು ಬಾಗಿಲು: ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2022, 11:16 IST
Last Updated 26 ಫೆಬ್ರುವರಿ 2022, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ, ಭಯದ ನಡುವೆಯೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಸುಳ್ಳಿನ ಜಾತ್ರೆ’ಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಟ್ವೀಟ್ ಮಾಡಿದೆ.

‘ಮೇಕೆದಾಟು ಪಾದಯಾತ್ರೆಯಿಂದ ಡಿ.ಕೆ. ಶಿವಕುಮಾರ್ ಅವರು ದೆಹಲಿಯ ನಾಯಕರಿಗೆ ಹತ್ತಿರ ಆಗಬಹುದೆಂಬ ಭಯ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಈ ಭಯದ ನಡುವೆಯೂ ಮೇಕೆದಾಟು ಪಾದಯಾತ್ರೆ ಎಂಬ ಸುಳ್ಳಿನ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಉದರ ನಿಮಿತ್ತಂ ಬಹುಕೃತ ವೇಷಂ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರಿಗೆ, ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಪ್ರಭಾವ ಮಾಸುತ್ತಿರುವುದು ತಿಳಿದಿದೆ. ಮೇಕೆದಾಟು ಪಾದಯಾತ್ರೆ ಪ್ರಹಸನದಲ್ಲಿ ಲಾಭವಾಗುವುದು ಡಿ.ಕೆ. ಶಿವಕುಮಾರ್ ಅವರಿಗೆ ಎಂದು ಸಿದ್ದರಾಮಯ್ಯಗೆ ತಿಳಿದಿದೆ. ಸಿದ್ದರಾಮಯ್ಯ ಅವರೇ, ಇದು ನಿಮಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಅಲ್ವೇ?’ ಎಂದು #ಕಾಂಗ್ರೆಸ್‌ಕಲಹ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

‘ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ, ಈಗ ಮನೆಯೊಂದು ಮೂರು ಬಾಗಿಲು! ದೆಹಲಿ ಪ್ರವಾಸದ ಮೂಲಕ ತೇಪೆ ಹಚ್ಚುವ ಕಾರ್ಯ ನಡೆದಿದೆ. ಆದರೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಆಂತರಿಕ ಕಲಹ ಯಾವ ಸ್ವರೂಪದಲ್ಲಿದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯಿಂದಲೇ ತಿಳಿಯಬಹುದು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.