ADVERTISEMENT

‘ಗಡಿ’ ಅಭಿವೃದ್ಧಿಗೆ ಸಿಗದ ₹25 ಕೋಟಿ! ವಿಲೇವಾರಿಯಾಗದ ಕಡತ

ಆರ್ಥಿಕ ಇಲಾಖೆಯಿಂದ ವಿಲೇವಾರಿಯಾಗದ ಕಡತ

ರಾಜೇಶ್ ರೈ ಚಟ್ಲ
Published 10 ಡಿಸೆಂಬರ್ 2022, 2:12 IST
Last Updated 10 ಡಿಸೆಂಬರ್ 2022, 2:12 IST
   

ಬೆಂಗಳೂರು: ರಾಜ್ಯದ ಗಡಿಭಾಗದ ಕನ್ನಡ ಶಾಲೆಗಳನ್ನು ಇದೇ ವರ್ಷ₹100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಆದರೆ, ಗಡಿಭಾಗದ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಚಟುವಟಿಕೆ ಅನುಷ್ಠಾನಗೊಳಿಸಲು ಪ್ರಸಕ್ತ ಸಾಲಿನ (2022–23) ಪೂರಕ ಅಂದಾಜಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ ₹ 25 ಕೋಟಿ ಇನ್ನೂ ಬಿಡುಗಡೆಯೇ ಆಗಿಲ್ಲ!

ವಿಧಾನಸಭೆಯಲ್ಲಿ ಸೆ. 21ರಂದು ಮಂಡಿಸಿದ ಪೂರಕ ಅಂದಾಜಿನಲ್ಲಿ ‘ಮುಂದುವರಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು’ ಎಂಬ ಷರತ್ತು ವಿಧಿಸಿ ₹ 25 ಕೋಟಿ ಹಂಚಿಕೆ ಮಾಡಲಾಗಿದೆ. ಬಳಿಕ ಆ ಷರತ್ತು ಬದಲಿಸಿದ ಮುಖ್ಯಮಂತ್ರಿ, ಪ್ರಸಕ್ತ ಸಾಲಿ ಗಡಿ ಭಾಗದ ಬೇಡಿಕೆಗೆ ಅನುಗುಣವಾಗಿ ಹೊಸ ಅಭಿವೃದ್ಧಿ ಚಟುವಟಿಕೆ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವಂತೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಆದರೆ, ಎರಡೂವರೆ ತಿಂಗಳು ಕಳೆದರೂ ಈ ಹಣ ಬಿಡುಗಡೆ ಆಗಿಲ್ಲ. ನ.4ರಿಂದ 16ರವರೆಗೆ ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಪಿ.ಸಿ. ಜಾಫರ್‌ ಬಳಿ ಇದ್ದ ಹಣ ಬಿಡುಗಡೆಯ ‘ಇ–ಕಡತ’, ನ. 18ರಿಂದ ‌ಸಿ ಎಂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರ ಬಳಿ ಇದೆ.

ADVERTISEMENT

ಕರ್ನಾಟಕಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಗಡಿಯಲ್ಲಿನ ಕನ್ನಡ ಪರಿಸರದ ಭಾಗಗಳಲ್ಲಿ ಮತ್ತು ರಾಜ್ಯದ 19 ಜಿಲ್ಲೆಯ 63 ಗಡಿ ತಾಲ್ಲೂಕುಗಳಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಲು ಪ್ರಾಧಿಕಾರ ರಚಿಸಲಾಗಿದೆ.

ಕಳೆದ 10 ವರ್ಷಗಳಲ್ಲಿ ಮಹಾರಾಷ್ಟ್ರದ ಗಡಿ ಕನ್ನಡ ಪ್ರದೇಶಗಳಲ್ಲಿ ವಿವಿಧ ಯೋಜನೆ, ಕಾರ್ಯಕ್ರಮಗಳಿಗೆ ಬಿಡುಗಡೆಯಾಗಿರುವುದು ಕೇವಲ₹26.54 ಕೋಟಿ. ಅದರಲ್ಲಿ ₹ 10.40 ಕೋಟಿ ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ವೆಚ್ಚವಾದರೆ, ₹ 1.65 ಕೋಟಿ ಶಾಲಾ ಆವರಣ ಗೋಡೆ, ₹1.38 ಕೋಟಿ ಕ್ರೀಡಾ ಕೊಠಡಿ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲ ತಿಳಿಸಿದೆ.

‘ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 15.14 ಕೋಟಿ ಹಂಚಿಕೆ ಮಾಡಲಾಗಿದೆ. ಹೊರನಾಡುಗಳಲ್ಲಿ ನಿರ್ಮಿಸಲು ಉದ್ದೇಶಿಸಿದ ಮೂರು ಕನ್ನಡ ಭವನಗಳಿಗೆ ಒದಗಿಸಿದ ₹ 5 ಕೋಟಿಯೂ ಇದರಲ್ಲಿ ಸೇರಿದೆ. ಕನ್ನಡ ಭವನ ನಿರ್ಮಾಣಕ್ಕೆಂದು ಈವರೆಗೆ ₹ 1.25 ಕೋಟಿ (ಶೇ 25) ಬಿಡುಗಡೆಯಾಗಿದೆ. ಭವನ ನಿರ್ಮಾಣಕ್ಕೆ ದಕ್ಷಿಣ ಕನ್ನಡ (ಕಾಸರಗೋಡು) ಮತ್ತು ಬೆಳಗಾವಿ (ಸೊಲ್ಲಾಪುರ) ಜಿಲ್ಲಾಧಿಕಾರಿಗಳ ಖಾತೆಗೆ ತಲಾ ₹ 50 ಲಕ್ಷ , ಉತ್ತರ ಕನ್ನಡ ಜಿಲ್ಲಾಧಿಕಾರಿಗೆ (ಗೋವಾ) ₹ 25 ಲಕ್ಷ ನೀಡಲಾಗಿದೆ. ಆದರೆ, ಬಿಡುಗಡೆಯಾದ ಮೊತ್ತದಲ್ಲಿ ಶೇ 75ರಷ್ಟು ವೆಚ್ಚವಾದ ನಂತರ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು’ ಎಂದೂ ಮೂಲಗಳು ತಿಳಿಸಿವೆ.

ಸರ್ಕಾರಿ ಜಾಗ ಕೊಡಲ್ಲ– ಗೋವಾ

ಗೋವಾದಲ್ಲಿ ₹ 10 ಕೋಟಿ‌ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸುವುದಾಗಿ ಬಜೆಟ್‌ ಪೂರ್ವದಲ್ಲಿಯೇ ಮುಖ್ಯಮಂತ್ರಿ ಘೋಷಿಸಿದ್ದರು. ಭವನ ನಿರ್ಮಿಸಲು ಜಾಗ ನೀಡುವಂತೆ ಗೋವಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ವಾಸ್ಕೊ ಶಾಸಕ ಕೃಷ್ಣಂಜಿ ಸಲ್ಕರ್‌, ಗೋವಾ ಜಿಲ್ಲಾಧಿಕಾರಿ ಮತ್ತು ಝುವಾರಿ ಕೆಮಿಕಲ್ಸ್‌ ಸಂಸ್ಥೆಗೆ ಪ್ರಾಧಿಕಾರದಿಂದ ಪತ್ರ ಬರೆದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಕನಿಷ್ಠ 1ರಿಂದ 2 ಎಕರೆಯಷ್ಟು ಸರ್ಕಾರಿ ಜಾಗ ನೀಡುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ಗೆ ಸೆ. 20ರಂದು ಬೊಮ್ಮಾಯಿ ಪತ್ರ ಬರೆದಿದ್ದಾರೆ. ಆದರೆ, ನ. 13ರಂದು ಗೋವಾದ ಬಿಚೋಲಿಯಲ್ಲಿ ನಡೆದ ಕನ್ನಡಿಗರ ಸಮ್ಮೇಳನದಲ್ಲಿ ಮಾತನಾಡಿದ ಸಾವಂತ್‌, ‘ಕನ್ನಡ ಭವನ ನಿರ್ಮಾಣಕ್ಕೆ ಕೊಡಲು ಸರ್ಕಾರದ ಬಳಿ ಜಾಗ ಇಲ್ಲ. ಖಾಸಗಿಯಾಗಿ ಖರೀದಿಸಿ, ಕಟ್ಟಿಕೊಳ್ಳಿ’‌ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

₹100 ಕೋಟಿ ಒದಗಿಸಿ ಗಡಿ ಭಾಗ ಅಭಿವೃದ್ಧಿಪಡಿಸುವ ಕನಸನ್ನು ರಾಮದುರ್ಗದಲ್ಲಿ ಸಿಎಂ ಬಿಚ್ಚಿಟ್ಟಿದ್ದಾರೆ. ಕನಸು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ.

- ಸಿ. ಸೋಮಶೇಖರ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 25 ಕೋಟಿ ಬಿಡುಗಡೆಗೆ ಸಂಬಂಧಿಸಿದ ‘ಇ– ಕಡತ’ ನನ್ನ ಬಳಿ ಬಂದ ಬಗ್ಗೆ ಮಾಹಿತಿ ಇಲ್ಲ. ಬಂದಿದ್ದರೆ ಪರಿಶೀಲಿಸಿ, ತಕ್ಷಣವೇ ವಿಲೇವಾರಿ ಮಾಡುತ್ತೇನೆ.

- ಎನ್. ಮಂಜುನಾಥ್ ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ

ಗಡಿ ಪ್ರದೇಶಗಳ ಅಭಿವೃದ್ಧಿ, ಅನುದಾನ ನೀಡುವ ವಿಚಾರದಲ್ಲಿ ಕಾರ್ಯಸಾಧುವಾದ ಭರವಸೆಗಳನ್ನು ಮುಖ್ಯಮಂತ್ರಿ ನೀಡಬೇಕು. ಅದರಂತೆ ನಡೆದು ಕೊಳ್ಳಬೇಕು.

- ಅಶೋಕ ಚಂದರಗಿ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಸರ್ಕಾರದ ಜಾಗ ಕೊಡಲ್ಲ ಎಂದು ಗೋವಾ ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿರುವುದರಿಂದ ಕರ್ನಾಟಕ ಸರ್ಕಾರ ಖಾಸಗಿ ಜಾಗ ಖರೀದಿಸಿ ಕನ್ನಡ ಭವನ ನಿರ್ಮಿಸಬೇಕು.

- ಸಿದ್ದಣ್ಣ ಮೇಟಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್, ಗೋವಾ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.