
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಹಿಂದುಳಿದ ವರ್ಗಗಳಿಗೆ 2026-27ನೇ ಸಾಲಿನ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಮೀಸಲಿಡಬೇಕು ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಬಜೆಟ್ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2025-26ನೇ ಸಾಲಿನಲ್ಲಿ ₹3,514.08 ಕೋಟಿ ಒದಗಿಸಲಾಗಿತ್ತು. ರಾಜ್ಯದ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಇರುವ ವರ್ಗಗಳಿಗೆ ನೀಡಿದ ಅನುದಾನ ಕಡಿಮೆಯಾಗಿತ್ತು. ಮಧುಸೂದನ ನಾಯ್ಕ್ ಅವರ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಅನ್ವಯ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ₹1,000 ಕೋಟಿ ಮತ್ತು ಇತರೆ ನಿಗಮಗಳಿಗೆ ತಲಾ ₹500 ಕೋಟಿ ನೀಡಬೇಕು. ಹೊಸದಾಗಿ 25 ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಬೇಕು. ಅಭಿವೃದ್ಧಿ ನಿಗಮಗಳಿಂದ ಪಡೆದ ಸಾಲದ ಬಡ್ಡಿ ಮನ್ನಾ ಮಾಡಬೇಕು. 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು. ವಸತಿ ನಿಲಯಗಳ ಭೋಜನಾ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹500 ನಿಗದಿ ಮಾಡಬೇಕು. ಮೀಸಲಾತಿ ಅನ್ವಯವೇ ಪ್ರವೇಶ ನೀಡಬೇಕು. ಕಟ್ಟಡಗಳಿಗೆ ₹700 ಕೋಟಿ ಅನುದಾನ ಮೀಸಲಿಡಬೇಕು ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಪ್ರವರ್ಗ-1 ಮತ್ತು ಪ್ರವರ್ಗ-2ಎಗೆ ಸಿವಿಲ್ ಕಾಮಗಾರಿಗಳಲ್ಲಿ ಹಾಗೂ ಸರಕು, ಸಾಮಗ್ರಿ ಸರಬರಾಜುಗಳಲ್ಲಿ ಗುತ್ತಿಗೆ ಮೀಸಲಾತಿಯನ್ನು ₹2 ಕೋಟಿಯವರೆಗೆ ಘೋಷಿಸಲಾಗಿತ್ತು. ಈ ಸಂಬಂಧ ಆದೇಶ ಹೊರಡಿಸಬೇಕು. ಒಕ್ಕೂಟದ ಕಾರ್ಯ ಚಟುವಟಿಕೆಗಳಿಗೆ ₹5 ಕೋಟಿ ನೀಡಬೇಕು. ಬೆಂಗಳೂರು ನಗರದಲ್ಲಿ ಸ್ವಂತ ಕಟ್ಟಡ ಕಟ್ಟಲು 50X80 ಅಡಿಗಳ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಬೇಕು ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.