
ಆರ್. ಅಶೋಕ
ಬೆಳಗಾವಿ: ‘2025-26ನೇ ಆರ್ಥಿಕ ಸಾಲಿನ 8.5 ತಿಂಗಳು ಕಳೆದು ಕೇವಲ 3.5 ತಿಂಗಳು ಬಾಕಿಯಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಸರ್ಕಾರದ 47 ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ₹ 4.09 ಲಕ್ಷ ಕೋಟಿ ಹಣದಲ್ಲಿ ಈವರೆಗೂ ಕೇವಲ ₹ 2.06 ಲಕ್ಷ ಕೋಟಿ ಅನುದಾನ ವೆಚ್ಚವಾಗಿದೆ. ಈ ಅಂಶವು ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.
‘ಪ್ರಜಾವಾಣಿ’ಯ ಡಿ.15ರ ಸಂಚಿಕೆಯಲ್ಲಿ ಪ್ರಕಟವಾದ ‘8 ತಿಂಗಳು: ಶೇ 50 ವೆಚ್ಚ’ ವರದಿಯ ಸಹಿತ ‘ಎಕ್ಸ್’ ಮಾಡಿರುವ ಅವರು, ‘ಅದರಲ್ಲೂ ವಿಶೇಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಚಿವ ಸಂತೋಷ್ ಲಾಡ್ ಅವರ ಇಲಾಖೆಗಳ ಸಾಧನೆ ತೀರಾ ಕಳಪೆಯಾಗಿದ್ದು ಐಟಿ - ಬಿಟಿ ಇಲಾಖೆಯಲ್ಲಿ ಕೇವಲ ಶೇ 20, ಕಾರ್ಮಿಕ ಇಲಾಖೆಯಲ್ಲಿ ಕೇವಲ ಶೇ 29 ಮತ್ತು ಆರ್‌ಡಿಪಿಆರ್ ಇಲಾಖೆಯಲ್ಲಿ ಕೇವಲ ಶೇ 30 ಅನುದಾನ ವೆಚ್ಚವಾಗಿದೆ’ ಎಂದಿದ್ದಾರೆ.
‘ಅನವಶ್ಯಕ ಹೇಳಿಕೆಗಳು, ಕ್ಷುಲ್ಲಕ ರಾಜಕೀಯ, ಕುಚೋದ್ಯದಲ್ಲೇ ಕಾಲಹರಣ ಮಾಡುವ ಈ ಇಬ್ಬರೂ ಸಚಿವರು, ಇನ್ನಾದರೂ ತಮ್ಮ ಇಲಾಖೆಗಳ ಕರ್ತವ್ಯ ನಿರ್ವಹಣೆ ಬಗ್ಗೆ ಗಮನ ಹರಿಸಲಿ’ ಎಂದೂ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.