ADVERTISEMENT

karnataka Budget | ಬಜೆಟ್‌ ನಿರೀಕ್ಷೆ: ಅಭಿವೃದ್ಧಿಗೆ ಒತ್ತು ನೀಡಿ..

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
<div class="paragraphs"><p> ಬಜೆಟ್‌ ನಿರೀಕ್ಷೆ</p></div>

ಬಜೆಟ್‌ ನಿರೀಕ್ಷೆ

   

‘ಮೇಲ್ಸೇತುವೆ ವಿಸ್ತರಿಸಿ’ 

ಎಂ.ಎಸ್. ನಗರ ವಾರ್ಡ್‌ನ ಬಾಣಸವಾಡಿ ಮುಖ್ಯರಸ್ತೆಯ ಮುಕುಂದ ರಂಗಮಂದಿರದ ಬಳಿ ಇರುವ ಮೇಲ್ಸೇತುವೆಯನ್ನು ವಿಸ್ತರಿಸುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಬೇಕು. ಸದ್ಯ ಈ ಮೇಲ್ಸೇತುವೆ ಕಿರಿದಾಗಿದೆ. ಇದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಇದನ್ನು ವಿಸ್ತರಿಸುವ ಮೂಲಕ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. 

- ಇ.ಎಸ್. ಮುನಿರತ್ನಂ, ಎಚ್ಆರ್‌ಬಿಆರ್‌ ಲೇಔಟ್

ADVERTISEMENT

ಇ.ಎಸ್. ಮುನಿರತ್ನಂ

‘ಹದಗೆಟ್ಟ ರಸ್ತೆಗಳ ದುರಸ್ತಿಗೊಳಿಸಿ’ 

ಬೆಂಗಳೂರು ನಗರದ ಜೀವನ ಮಟ್ಟವನ್ನು ಸುಗಮಗೊಳಿಸಲು ಹದಗೆಟ್ಟ ರಸ್ತೆಗಳನ್ನು, ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ಅರ್ಧಕ್ಕೆ ನಿಂತಿರುವ ಮೇಲ್ಸೇತುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮೆಟ್ರೊ ಕಾಮಗಾರಿಗೆ ವೇಗ ನೀಡಬೇಕು. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆಗೆ ಹೆಚ್ಚಿನ ಮೂಲಸೌಕರ್ಯ ನೀಡಬೇಕು. ಕಾವೇರಿ ನೀರಿನ ಸೌಕರ್ಯ ಎಲ್ಲ ಮನೆಗಳಿಗೆ ವಿಸ್ತರಿಸಬೇಕು. ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚಿಸಬೇಕು. 

- ಎಂ.ಎನ್. ಬಸವರಾಜು, ರಾಜರಾಜೇಶ್ವರಿ ನಗರ

ಎಂ.ಎನ್. ಬಸವರಾಜು

‘ಮಾತೃ ಭಾಷೆಗೆ ಆದ್ಯತೆ ನೀಡಿ’ 

ಮುಂಬರುವ ಬಜೆಟ್‌ನಲ್ಲಿ ಮಾತೃ ಭಾಷೆಯ ಪ್ರಚಾರ ಮಾಡಲು ಆದ್ಯತೆ ನೀಡಬೇಕು. ಬೆಂಗಳೂರು ನಗರದ ಎಲ್ಲ ಅಂಗಡಿಗಳು, ಐಟಿ ಕಂಪನಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಉತ್ತೇಜಿಸಬೇಕು. ಈ ಕುರಿತು ಸಮಗ್ರ ಯೋಜನೆ ರೂಪಿಸಿ, ಅದನ್ನು ಅನುಷ್ಠಾನಗೊಳಿಸಬೇಕು. ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೂ ಕನ್ನಡ ಕಲಿಸುವ ಕೆಲಸವನ್ನು ಸರ್ಕಾರ ಮಾಡಬೇಕು. 

- ವಿ. ನಾಗರಾಜು, ರಾಜಾಜಿನಗರ

ವಿ. ನಾಗರಾಜು

‘ಸಾರ್ವಜನಿಕ ಸಾರಿಗೆ ಉತ್ತೇಜಿಸಿ’ 

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಬೇಕು. ಮೆಟ್ರೊ ಮಾರ್ಗಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು. ನಗರದ ಎಲ್ಲ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಬೇಕು. ಪಾದಚಾರಿ ಮಾರ್ಗಗಳನ್ನು ಎತ್ತರಿಸಬೇಕು. ಇದರಿಂದ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಕಡಿವಾಣ ಹಾಕಬಹುದು. 

- ಆನಂದ್ ಕುಮಾರ್, ಕುರುಬರಹಳ್ಳಿ

ಆನಂದ್ ಕುಮಾರ್ 

‘ಪಾದಚಾರಿ ಮಾರ್ಗ, ರಸ್ತೆ ಅಭಿವೃದ್ಧಿಪಡಿಸಿ’

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಇಲ್ಲಿನ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಆದರೆ ಪಾದಚಾರಿ ಮಾರ್ಗಗಳನ್ನು ಬೀದಿ ಬದಿ ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನಿರ್ದಿಷ್ಟ ಜಾಗ ನೀಡಬೇಕು. 

- ಸಿ. ಶಾಂತಕುಮಾರ್‌  ಎಸ್.ಆರ್. ನಗರ 

ಸಿ. ಶಾಂತಕುಮಾರ್‌ 

‘ಮಳೆಗಾಲದ ಬವಣೆ ನೀಗಿಸಿ’

ಪ್ರತಿವರ್ಷ ಮಳೆಗಾಲ ಬಂತೆಂದರೆ ಬೆಂಗಳೂರಿನ ತಗ್ಗು ಪ್ರದೇಶಗಳು ಕೆರೆಯಂತಾಗಿ ಮನೆಗಳಿಗೆ ನೀರು ನುಗ್ಗುತ್ತದೆ. ನಗರದ ಅನೇಕ ಕೆರೆಗಳು, ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಹೆಚ್ಚು ತೊಂದರೆ ಆಗುತ್ತಿದೆ. ಆದ್ದರಿಂದ ಮಳೆಗಾಲದಲ್ಲಿ ಸಮಸ್ಯೆ ಎದುರಿಸುವ ಬಡಾವಣೆಗಳನ್ನು ಗುರುತಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು. 

- ಡಿ. ಪ್ರಸನ್ನಕುಮಾರ್, ಜೀವನ್‌ ಭಿಮಾನಗರ

ಡಿ. ಪ್ರಸನ್ನಕುಮಾರ್
ಬಜೆಟ್‌ ನಿರೀಕ್ಷೆ: ನೀವೂ ಬರೆಯಿರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು ಬಜೆಟ್‌ ಮಂಡಿಸಲಿದ್ದಾರೆ. ಮೆಟ್ರೊ, ಸುರಂಗ ರಸ್ತೆ, ಮೇಲ್ಸೇತುವೆಗಳ ನಿರ್ಮಾಣ, ರಸ್ತೆ, ಶೌಚಾಲಯ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸೇರಿದಂತೆ ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಅನುದಾನದ ಅಗತ್ಯವಿದೆ. ಜೀವನಮಟ್ಟವನ್ನು ಸುಗಮಗೊಳಿಸಲು ಸರ್ಕಾರ ಬಜೆಟ್‌ನಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು. ತಮ್ಮ ನಿರೀಕ್ಷೆಗಳು ಏನು ಎಂಬುದನ್ನು ಜನರು ಹಂಚಿಕೊಳ್ಳಬಹುದು. 50 ಪದಗಳಿಗೆ ಮೀರದಂತೆ ಬರೆದು, ಭಾವಚಿತ್ರ ಸಮೇತ ಕಳುಹಿಸಬೇಕು. ವಾಟ್ಸ್‌ಆ್ಯಪ್‌ ಸಂಖ್ಯೆ: 9606038256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.