ADVERTISEMENT

ಅಭಿವೃದ್ಧಿ ನೋಟದ ಪ್ರತಿಬಿಂಬ ಬಜೆಟ್‌: ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 22:00 IST
Last Updated 23 ಫೆಬ್ರುವರಿ 2023, 22:00 IST
   

ಬೆಂಗಳೂರು: ‘ಸರ್ಕಾರ ಮಂಡಿಸಿದ 2023–24ನೇ ಸಾಲಿನ ಬಜೆಟ್‌ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ನೋಟದ ಪ್ರತಿಬಿಂಬ. ಮುಂದಾಲೋಚನೆಯ ಪರಿಪೂರ್ಣ ಬಜೆಟ್’ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಬಣ್ಣಿಸಿದರು.

ವಿಧಾನ ಪರಿಷತ್‌ನಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಆರೋಗ್ಯ, ಶಿಕ್ಷಣ, ಆರ್ಥಿಕತೆ ಹೀಗೆ ಎಲ್ಲ ವಲಯಗಳಿಗೂ ಬಜೆಟ್‌ನಲ್ಲಿ ಸಮನಾಗಿ ಅನುದಾನ ಒದಗಿಸಲಾಗಿದೆ’ ಎಂದರು.

‘ಕೋವಿಡ್ ನಂತರ ರಾಜ್ಯ ಸಾಕಷ್ಟು ವೇಗದಲ್ಲಿ ಚೇತರಿಸಿಕೊಂಡಿದೆ. ಪರಿಣಾಮವಾಗಿ ಆರ್ಥಿಕ ಸ್ಥಿತಿ ಸುಧಾರಿಸಿದೆ. ಉತ್ಪಾದನಾ ಚಟುವಟಿಕೆ ಹೆಚ್ಚಿದೆ. ಅಗತ್ಯವಾದ ಕಚ್ಚಾವಸ್ತುಗಳು, ಕಾರ್ಮಿಕರ ಬಳಕೆಯೂ ಹೆಚ್ಚಾಗಿದೆ. ವಿಮಾನಯಾನ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸಾಧನೆ ಆಗಿದೆ. ತಲಾವಾರು ಆದಾಯ ಹೆಚ್ಚಳವನ್ನೂ ಗಮನಿಸಬೇಕು’ ಎಂದರು.

ADVERTISEMENT

‘ಶಿಕ್ಷಣ ಪಡೆಯಲು ಮಕ್ಕಳು ಮಾಡಿದ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಪರಿಪೂರ್ಣವಾಗಿ ರಚಿಸಬೇಕು. ಸರ್ಕಾರ ಕನಿಷ್ಠ ವೇತನ ಜಾರಿಗೊಳಿಸಬೇಕು. ಕೆಳದಿ ಚೆನ್ನಮ್ಮ ಸ್ಮಾರಕ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

ಬಜೆಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ಸಿನ ಪಿ.ಆರ್. ರಮೇಶ್‌, ‘ಇದರಲ್ಲಿರುವ ಘೋಷಣೆಗಳು ಬಜೆಟ್‌ ಪುಸ್ತಕದಲ್ಲಷ್ಟೆ ಉಳಿಯಲಿವೆ. ಅನುಷ್ಠಾನಗೊಳಿಸಲು ಸಾಧ್ಯವೇ ಇಲ್ಲ’ ಎಂದರು.

‘ಬೆಳೆಯುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಿ ಸಲು ಹೊಸ ನೀತಿ ರೂಪಿಸಬೇಕು. ರಾಮಮಂದಿರ ನಿರ್ಮಾಣ ಸರ್ಕಾರದ ಕೆಲಸವಲ್ಲ. ಅದರ ಬದಲು ರಾಜ್ಯದಾದ್ಯಂತ ಇರುವ ರಾಮಮಂದಿರಗಳು, ಭಜನಾ ಮಂಡಳಿಗಳಿಗೆ ಅನುದಾನ ನೀಡಬೇಕು’ ಎಂದರು.

ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ, ಜೆಡಿಎಸ್‌ನ ಗೋವಿಂದರಾಜು ಮತ್ತು ಮರಿತಿಬ್ಬೇಗೌಡ ಕೂಡಾ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.