ADVERTISEMENT

ಅಧಿವೇಶನ: ಪೂರ್ಣ ಕಲಾಪ ಅನುಮಾನ

15ನೇ ವಿಧಾನಸಭೆಯ ಕೊನೆಯ ಬಜೆಟ್‌ ಮಂಡನೆಗೆ ದಿನಗಣನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 21:28 IST
Last Updated 9 ಫೆಬ್ರುವರಿ 2023, 21:28 IST
session
session   

ಬೆಂಗಳೂರು: ಪಕ್ಷದ ಪರ ಅಲೆ ಎಬ್ಬಿಸಲು ವಿವಿಧ ಕಡೆಗಳಲ್ಲಿ ಯಾತ್ರೆ ನಡೆಸುತ್ತಿರುವ ನಾಯಕರು, ಮತ್ತೊಮ್ಮೆ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿರುವ ಎಲ್ಲ ಪಕ್ಷದ ಶಾಸಕರು ಕ್ಷೇತ್ರದಲ್ಲೇ ಬೆವರು ಹರಿಸುತ್ತಿರುವುದರಿಂ
ದಾಗಿ 15 ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕಲಾಪ ನಿಗದಿಯಾದಷ್ಟು ದಿನ ನಡೆಯುವುದೇ ಅನುಮಾನ.

ಈ ಅಧಿವೇಶನ ಮುಗಿದ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಮುಂದೆಯೂ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಸಲುವಾಗಿ ಶಾಸಕರು ಹರಸಾಹಸ ಪಡುತ್ತಿದ್ದು, ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿ
ರುವ ಈ ಅವಧಿಯ ಕೊನೆಯ ಬಜೆಟ್‌ನಲ್ಲಿ ತಮ್ಮ ಕ್ಷೇತ್ರಗಳಿಗೆ ಯೋಜನೆಗಳು ಘೋಷಣೆಯಾದರೂ ಅನುದಾನ ದಕ್ಕುವುದಿಲ್ಲ. ಒಂದುವೇಳೆ ಹಣ ಬಿಡುಗಡೆಯಾದರೂ ಖರ್ಚು ಮಾಡಲು ನೀತಿ ಸಂಹಿತೆ ಅಡ್ಡಿ ಬರಲಿದೆ. ಹೀಗಾಗಿ, ಕಲಾಪದ ಮೇಲೆ ಬಹುತೇಕ ಶಾಸಕರಿಗೆ ಆಸಕ್ತಿಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.

ಸರ್ಕಾರದ ವೈಫಲ್ಯವನ್ನು ಜನರ ಮುಂದೆ ತೆರೆದಿಡಲು ವಿರೋಧ ಪಕ್ಷದವರಿಗೆ ಇದು ಕೊನೆಯ ಅವಕಾಶ. ಆದರೆ, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ, ಅದರ ಮೇಲೆ ಚರ್ಚೆ ಹಾಗೂ ವಂದನಾ ನಿರ್ಣಯಕ್ಕೆ ಮೊದಲ ವಾರ ಸೀಮಿತವಾಗುತ್ತದೆ. ಫೆ.17ರಂದು ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದು, 20ರಿಂದ 24ವರೆಗೆ ಬಜೆಟ್‌ ಮೇಲಿನ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಸರ್ಕಾರದ ‘ಬಂಡವಾಳ’ ಬಿಚ್ಚಿಡಲು ಸಮಯಾವಕಾಶ ಸಿಗದು ಎಂಬ ಕಾರಣಕ್ಕೆ ವಿರೋಧ ಪಕ್ಷಗಳ ನಾಯಕರು ಹೆಚ್ಚಿನ ‌ಉತ್ಸುಕತೆ ತೋರಿಸುತ್ತಿಲ್ಲ
ಎಂದು ಆಯಾ ಪಕ್ಷದ ಮೂಲಗಳು ಹೇಳಿವೆ.

ADVERTISEMENT

‘ಗಾಂಭೀರ್ಯ ಕಡಿಮೆಯಾಗದಿರಲಿ’

‘ವಿಧಾನಮಂಡಲ ಅಧಿವೇಶನಕ್ಕೆ ಎಲ್ಲ ಸದಸ್ಯರು ಹಾಜರಾಗಬೇಕು. ಚುನಾವಣೆಯ ಕಾರಣಕ್ಕೆ ಅಧಿವೇಶನದ ಗಾಂಭೀರ್ಯ ಕಡಿಮೆ ಆಗಬಾರದು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಮತ್ತು ಆರು ಖಾಸಗಿ ವಿಶ್ವವಿದ್ಯಾನಿಲಯಗಳ ಮಸೂದೆಗಳನ್ನು ಮಂಡಿಸಲಾಗುವುದು’ ಎಂದರು.

‘ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಸೇರಿದಂತೆ ಎಲ್ಲ ಕಾರ್ಯಕಲಾಪಗಳೂ ನಡೆಯಲಿವೆ. ಅಧಿವೇಶನದ ವೇಳಾಪಟ್ಟಿ ಪ್ರಕಟವಾದ ಬಳಿಕವೂ ‌ರಾಜಕೀಯ ಪಕ್ಷಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವು ದನ್ನು ಗಮನಿಸಿದರೆ, ಕಲಾಪಕ್ಕೆ ಸದಸ್ಯರ ಹಾಜರಾತಿ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದ ಅವರು, ‘ಕಲಾಪವನ್ನು ಯಾರೂ ನಿರ್ಲಕ್ಷ್ಯ ಮಾಡಬಾರದು. ಜವಾಬ್ದಾರಿಯಿಂದ ಭಾಗವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.