ADVERTISEMENT

‘ಆಪರೇಷನ್‌ ಹಸ್ತ’ ಬಿಜೆಪಿಗೆ ಸಂಕಟ

ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 20:27 IST
Last Updated 11 ನವೆಂಬರ್ 2019, 20:27 IST
   

ಬೆಂಗಳೂರು: ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿಯ ಅತೃಪ್ತರನ್ನು ಕಾಂಗ್ರೆಸ್‌ನತ್ತ ಸೆಳೆಯುವ ‘ಆಪರೇಷನ್‌ ಹಸ್ತ’ ಬಿರುಸುಗೊಂಡಿದೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಗವಾಡದಲ್ಲಿ ಸ್ಪರ್ಧಿಸಿ ಶ್ರೀಮಂತ ಪಾಟೀಲ ಎದುರು ಸೋತಿದ್ದ ಮಾಜಿ ಶಾಸಕರೂ ಆಗಿರುವ ಭರಮಗೌಡ (ರಾಜು) ಕಾಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದಾರೆ.ಕಾಂಗ್ರೆಸ್‌ ಬಾಗಿಲು ತಟ್ಟಿರುವ ಗೋಕಾಕದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್ ಪೂಜಾರಿ ಅವರು ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಬೆಂಬಲಿಗರ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಹೊಸಕೋಟೆಯಲ್ಲಿ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಶರತ್‌ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಬಂಡಾಯದಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ.

ADVERTISEMENT

ಅಶೋಕ್‌ ಪೂಜಾರಿ ಸೇರ್ಪಡೆಗೆ ಸತೀಶ ಜಾರಕಿಹೊಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ವಲಸೆ ಬಂದವರಿಗೆ ಟಿಕೆಟ್‌ ನೀಡಬಾರದು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಎದ್ದಿದೆ.

‘ಬಿಜೆಪಿ ಬಿಡಲು ತೀರ್ಮಾನಿಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಬೆಂಬಲಿಗರ ಸಭೆ ನಡೆಸಿ ಮುಂದಿನ ಹೆಜ್ಜೆ ಇಡುತ್ತೇನೆ. ನನ್ನ ಹೋರಾಟ ಗೋಕಾಕ್‌ನಲ್ಲಿರುವ ವ್ಯವಸ್ಥೆಯ ವಿರುದ್ಧ. ಅದಕ್ಕೆ ಬದ್ಧನಾಗಿದ್ದೇನೆ’ ಎಂದು ಅಶೋಕ್ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉಪಚುನಾವಣೆಯಲ್ಲಿ ಬಹುತೇಕ ಎಲ್ಲ ಅನರ್ಹ ಶಾಸಕರಿಗೂ ಟಿಕೆಟ್‌ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಪಕ್ಷದ ಪ್ರಮುಖ ನಾಯಕರ ಸಭೆ ಕರೆದು ಟಿಕೆಟ್‌ ಹಂಚಿಕೆಯನ್ನು ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಚ್ಚೇಗೌಡ ವಿರುದ್ಧ ಎಂಟಿಬಿ ಕೆಂಡ: ‘ನಾನು ಕಾಂಗ್ರೆಸ್‌ ಬಿಡುವ ಮೊದಲೇ ಬಿ.ಎಸ್‌. ಯಡಿಯೂರಪ್ಪ ಅವರು ಬಚ್ಚೇಗೌಡರ ಬಳಿ ನನ್ನನ್ನು ಕರೆದುಕೊಂಡು ಹೋಗಿದ್ದರು. ಪಕ್ಷ ಸೇರ್ಪಡೆ ಮತ್ತು ಟಿಕೆಟ್‌ ನೀಡಲು ಅವರು ಒಪ್ಪಿಗೆಯೂ ನೀಡಿದ್ದರು. ಆದರೆ ಈಗ ಅಪ್ಪ– ಮಗ ಮೋಸ ಮಾಡುತ್ತಿದ್ದಾರೆ’ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್‌ ಕೆಂಡ ಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಚ್ಚೇಗೌಡ, ಎಂಟಿಬಿ ಹೇಳುತ್ತಿರುವುದು ಸುಳ್ಳು ಎಂದರು.

ರಾಜು ಕಾಗೆ ಕಾಂಗ್ರೆಸ್‌ ಅಭ್ಯರ್ಥಿ
‘ಬಿಜೆಪಿಗೆ ಮಂಗಳವಾರ ರಾಜೀನಾಮೆ ನೀಡಲಿದ್ದು, ಇದೇ 13 ರಂದು ಕಾಂಗ್ರೆಸ್‌ ಸೇರುತ್ತೇನೆ’ ಎಂದು ಭರಮಗೌಡ (ರಾಜು) ಕಾಗೆ ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕಾಗೆ ಕೆಲ ಹೊತ್ತು ಚರ್ಚೆ ನಡೆಸಿದರು. ‘ಮುಖ್ಯಮಂತ್ರಿ ಪದವಿ ಕೊಟ್ಟರೂ ಬಿಜೆಪಿ ಸೇರಲಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಾಮಪತ್ರ ಸಲ್ಲಿಕೆ ಆರಂಭ
ಬೆಂಗಳೂರು:
ವಿಧಾನಸಭೆ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಸೋಮವಾರ ಆರಂಭವಾಗಿದ್ದು, ಒಟ್ಟು 7 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ 3, ಅಥಣಿ 2, ಕೆ.ಆರ್.ಪುರ, ವಿಜಯನಗರ ಕ್ಷೇತ್ರದಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದ ಸಮಯದಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಆ ನಾಮಪತ್ರಗಳನ್ನೂ ಈಗ ಪರಿಗಣಿಸಲಾಗಿದೆ. ಹಾಗಾಗಿ ಈವರೆಗೆ 35 ಮಂದಿ, 36 ನಾಮಪತ್ರ ಸಲ್ಲಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.