ADVERTISEMENT

ಸಹಕಾರ ಸಂಘಕ್ಕೆ ಚುನಾವಣೆ ಸಚಿವ ಸಂಪುಟ ಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 20:11 IST
Last Updated 15 ಜುಲೈ 2021, 20:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಹಕಾರ ಸಂಘಗಳು, ಸೊಸೈಟಿಗಳು, ಎಪಿಎಂಸಿಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಗಳಿಗೆ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಸಹಕಾರ ಇಲಾಖೆ ವ್ಯಾಪ್ತಿಗೆ ಬರುವ ಸಹಕಾರ ಸಂಘಗಳು, ಸೊಸೈಟಿಗಳು, ಎಪಿಎಂಸಿಗಳಲ್ಲಿ ಅವಧಿ ಮುಗಿದ ನಿರ್ದೇಶಕ ಮಂಡಳಿಗಳಿಗೆ ಚುನಾವಣೆ ನಡೆಸಲಾಗುವುದು. ಆದರೆ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಡಿಸೆಂಬರ್‌ವರೆಗೆ ಚುನಾವಣೆ ನಡೆಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕೋವಿಡ್‌ ಕಾರಣದಿಂದ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು ಬೇಡ ಎಂದು ತೀರ್ಮಾನಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

‘ಎಷ್ಟು ಸಹಕಾರ ಸಂಘಗಳು, ಸೊಸೈಟಿ ಮತ್ತು ಎಪಿಎಂಸಿಗಳಲ್ಲಿ ಚುನಾವಣೆ ನಡೆಸಬೇಕು ಎಂಬ ಮಾಹಿತಿ ಇನ್ನಷ್ಟೇ ಕಲೆ ಹಾಕಬೇಕು. ರಾಜ್ಯ ಚುನಾವಣಾ ಆಯೋಗವೇ ಚುನಾವಣೆ ನಡೆಸಲಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಆಮ್ಲಜನಕ ಉತ್ಪಾದನಾ ಘಟಕಕ್ಕೆ ಪ್ರೋತ್ಸಾಹ

ವೈದ್ಯಕೀಯ ಆಮ್ಲಜನಕ ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ 9 ಉತ್ಪಾದನಾ ಘಟಕಗಳಿವೆ. ಒಟ್ಟು 815 ಟನ್‌ ಉತ್ಪಾದನಾ ಸಾಮರ್ಥ್ಯವಿದ್ದು, 5,700 ಟನ್‌ ದಾಸ್ತಾನು ಸಾಮರ್ಥ್ಯವಿದೆ. ಇವೆರಡ ಪ್ರಮಾಣ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ರಿಯಾಯ್ತಿಗಳನ್ನು ನೀಡಲಾಗುವುದು ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಆಮ್ಲಜನಕ ಉತ್ಪಾದನಾ ಘಟಕದ ಬಂಡವಾಳ ವೆಚ್ಚದ ಮೇಲೆ ಶೇ 25 ರಷ್ಟು ಸಹಾಯಧನ, ಮೂರು ವರ್ಷಗಳವರೆಗೆ ವಿದ್ಯುತ್‌ ಮೇಲಿನ ತೆರಿಗೆಯಿಂದ ಸಂಪೂರ್ಣ ವಿನಾಯ್ತಿ, ವಿದ್ಯುತ್ ಶುಲ್ಕ ಪಾವತಿಯಲ್ಲೂ ಪ್ರತಿ ಟನ್‌ ಆಮ್ಲಜನಕ ಉತ್ಪಾದನೆ ಮೇಲೆ ₹1,000 ಸಬ್ಸಿಡಿ ನೀಡಲಾಗುವುದು. ನೋಂದಣಿ ಮತ್ತು ಮುದ್ರಾಂಕದ ಸ್ಟ್ಯಾಂಪ್‌ ಡ್ಯೂಟಿಯಲ್ಲಿ ಶೇ 100 ರಷ್ಟು ವಿನಾಯ್ತಿ, ಭೂಪರಿವರ್ತನೆಗಾಗಿ ಪಾವತಿಸುವ ಶುಲ್ಕವನ್ನು ಶೇ 100 ರಷ್ಟು ಮರುಪಾವತಿ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.