ADVERTISEMENT

ಯಡಿಯೂರಪ್ಪ ಸಂಪುಟ ವಿಸ್ತರಣೆ ಸುತ್ತ 'ಸಂಶಯ'

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 21:15 IST
Last Updated 24 ಜನವರಿ 2020, 21:15 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ದಾವೋಸ್‌ನಿಂದ ಬಂದ ತಕ್ಷಣವೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಶುಕ್ರವಾರ ವಿಮಾನ ಇಳಿಯುತ್ತಿದ್ದಂತೆ ಈ ತಿಂಗಳ ಕೊನೆಯೊಳಗೆ ವಿಸ್ತರಣೆ ಮಾಡುವುದಾಗಿ ಹೇಳಿರುವುದು ‘ಅರ್ಹ’ ಶಾಸಕರನ್ನು ಆತಂಕಕ್ಕೆ ದೂಡಿದೆ.

‘ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಲಾಗುವುದೇ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ‘ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ದಾರೆ. ಇದರ ಅರ್ಥ, ಸೋತವರನ್ನು ಸಚಿವರನ್ನಾಗಿ ಮಾಡಲೂ ಬಹುದು ಅಥವಾ ಕೈಬಿಡಲೂಬಹುದು ಎಂದು ವ್ಯಾಖ್ಯಾನಿಸಲಾಗಿದೆ.

ಈ ಮಧ್ಯೆ ಕೆಲವು ಶಾಸಕರು ಶುಕ್ರವಾರ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದು, ರಾಜೀನಾಮೆ ಕೊಟ್ಟು ಬಂದ 17 ಮಂದಿಗೂ ಸಚಿವ ಸ್ಥಾನ ನೀಡಲೇಬೇಕು ಪಟ್ಟು ಹಿಡಿದಿದ್ದಾರೆ. ‘ಚುನಾವಣೆಯಲ್ಲಿ ಸೋತ ನಮ್ಮನ್ನು ಬಿಟ್ಟು ಸಂಪುಟ ವಿಸ್ತರಣೆ ಹೇಗೆ ಮಾಡಲು ಸಾಧ್ಯ’ ಎಂದು ಮೈಸೂರಿನಲ್ಲಿ ಎಚ್‌.ವಿಶ್ವನಾಥ್‌ ಪ್ರಶ್ನಿಸಿದ್ದಾರೆ.

ADVERTISEMENT

ಸಂಭಾವ್ಯ ಸಚಿವರ ಪಟ್ಟಿಗೆ ಒಪ್ಪಿಗೆ ಪಡೆಯಲು ದೆಹಲಿಗೆ ಹೋಗುವ ಬಗ್ಗೆ ಯಡಿಯೂರಪ್ಪ ಇನ್ನೂ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ. ಅವರನ್ನು ಶುಕ್ರವಾರ ಭೇಟಿಯಾದ ಶಾಸಕರು, ಪ್ರಶ್ನಿಸಿದಾಗ ಯಡಿಯೂರಪ್ಪ ಸ್ಪಷ್ಟ ಉತ್ತರವನ್ನೂ ನೀಡಲಿಲ್ಲ ಎನ್ನಲಾಗಿದೆ.

‘ಈ ತಿಂಗಳ ಒಳಗೇ ವಿಸ್ತರಣೆ ಆಗುತ್ತದೆ. ದೆಹಲಿಗೆ ಹೋಗಬೇಕಾಗಿಲ್ಲ. ವರಿಷ್ಠರುಒಪ್ಪಿಗೆ ನೀಡಿದ್ದಾರೆ. ಪಟ್ಟಿ ಬಿಡುಗಡೆ ಮಾಡಿ, ಸಂಪುಟ ವಿಸ್ತರಣೆ ಮಾಡುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

*
ಈಗ 16 ರಿಂದ 17 ಜನ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ. ಆಡಳಿತ ಚುರುಕಾಗಬೇಕಾದರೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲೇಬೇಕು.
- ಬಿ.ಸಿ.ಪಾಟೀಲ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.