
ನವದೆಹಲಿ: ಸಂಕ್ರಾಂತಿ ಮುಗಿದ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದ ಸಿದ್ದರಾಮಯ್ಯ ಅವರಿಗೆ ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್ ನಾಯಕರ ಜತೆಗೆ ಪ್ರತ್ಯೇಕವಾಗಿ ಮಾತುಕತೆ ಮಾಡಲು ಸಾಧ್ಯವಾಗಿಲ್ಲ. ಅವಕಾಶ ಸಿಕ್ಕರೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ರಾಹುಲ್ ಅವರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಬಯಸಿದ್ದರು.
ರಾಹುಲ್ ಗಾಂಧಿ ಅವರು ಭಾನುವಾರ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಅವರು ಜನವರಿ 8ಕ್ಕೆ ವಾಪಸಾಗಲಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯ ಬಳಿಕ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರೊಂದಿಗೆ ಸಮಾಲೋಚಿಸಿದ ಸಿದ್ದರಾಮಯ್ಯ, ’ರಾಹುಲ್ ಅವರು ಜನವರಿ 8ಕ್ಕೆ ಸ್ವದೇಶಕ್ಕೆ ಮರಳಲಿದ್ದಾರೆ. ಸಂಕ್ರಾಂತಿ ಮುಗಿದ ಬಳಿಕ ದೆಹಲಿಗೆ ಬಂದು ರಾಹುಲ್ ಅವರನ್ನು ಭೇಟಿಯಾಗೋಣ. ಸಂಪುಟ ಪುನರ್ ರಚನೆ ಬಗ್ಗೆ ಅವರಿಂದ ಒಪ್ಪಿಗೆ ಪಡೆಯೋಣ‘ ಎಂಬುದಾಗಿ ಹೇಳಿದ್ದಾರೆ.
ನವೆಂಬರ್ 15ರಂದು ರಾಷ್ಟ್ರ ರಾಜಧಾನಿಗೆ ಬಂದಿದ್ದ ಸಿದ್ದರಾಮಯ್ಯ ಅವರು ರಾಹುಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಸಚಿವ ಸಂಪುಟ ಪುನರ್ ರಚನೆ ಸೇರಿದಂತೆ ರಾಜ್ಯದ ವಿಷಯಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸುವಂತೆ ರಾಹುಲ್ ಸಲಹೆ ನೀಡಿದ್ದರು.
ಆ ಬಳಿಕ, ರಾಜ್ಯದಲ್ಲಿ ಸರ್ಕಾರದ ‘ನಾಯಕತ್ವ’ಕ್ಕಾಗಿ ಗುದ್ದಾಟ, ‘ಕೊಟ್ಟ ಮಾತು’ ಕುರಿತ ವಾಗ್ವಾದ ತಾರಕಕ್ಕೆ ಏರಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ‘ಅಧಿಕಾರ ಹಂಚಿಕೆಯ ಸೂತ್ರ’ದ ವಿಚಾರ ಮುನ್ನೆಲೆಗೆ ಬಂದಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ ಪಠಿಸುತ್ತಿದ್ದ ‘ನಾಯಕತ್ವ ಬದಲಾವಣೆ’ಯ ವಿಷಯಕ್ಕೆ ಪ್ರತಿಯಾಗಿ ಸಂಪುಟ ಪುನರ್‌ರಚನೆಯ ಅಸ್ತ್ರವನ್ನು ಸಿದ್ದರಾಮಯ್ಯ ಬಣ ಬಿಟ್ಟಿತ್ತು. ಪುನರ್ ರಚನೆಯ ವಿಷಯವನ್ನು ಸಿದ್ದರಾಮಯ್ಯ ಅವರೇ ದೃಢಪಡಿಸಿದ್ದರು.
ಸಂಪುಟಕ್ಕೆ ಸರ್ಜರಿಯಾದರೆ ಅಧಿಕಾರ ಹಸ್ತಾಂತರ ನನೆಗುದಿಗೆ ಬೀಳಲಿದೆ ಎಂದು ಆತಂಕಗೊಂಡ ಶಿವಕುಮಾರ್ ಬಣದ ಶಾಸಕರು ದೆಹಲಿಗೆ ದೌಡಾಯಿಸಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಯತ್ನಿಸಿದ್ದರು. ಈ ಎಲ್ಲ ಬೆಳವಣಿಗೆಯಿಂದಾಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ ತೀವ್ರಗೊಂಡಿತ್ತು. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಉಪಾಹಾರ ಕೂಟ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಆದರೆ, ಈ ಒಗ್ಗಟ್ಟು ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಅಂತಃಕಲಹ ಮತ್ತೆ ಬೀದಿಗೆ ಬಂದಿತ್ತು. ಇದೀಗ ಸಿದ್ದರಾಮಯ್ಯ ಅವರು ಮತ್ತೆ ಸಂಪುಟ ಪುನರ್ ರಚನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.
ದಲಿತ ಸಿ.ಎಂಗಾಗಿ ಪ್ರತಿಭಟನೆ
ಕರ್ನಾಟಕ ಮುಖ್ಯಮಂತ್ರಿಯಾಗಿ ದಲಿತರೊಬ್ಬರನ್ನು ನೇಮಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪ್ರಧಾನ ಕಚೇರಿಯ ಮುಂದೆ ಸುಮಾರು ಒಂದು ಡಜನ್ ಜನರು ಶನಿವಾರ ಪ್ರತಿಭಟನೆ ನಡೆಸಿದರು. ಇಂದಿರಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದಾಗ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಸೇವಾ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಬ್ಲ್ಯುಸಿ ಸಭೆಯಲ್ಲಿ ಹಾಜರಿದ್ದರು.
ಪ್ರತಿಭಟನಾಕಾರರು ಹಿಡಿದಿದ್ದ ಬ್ಯಾನರ್‌ನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರ ಚಿತ್ರ ಹಾಗೂ ತೋಲ್ ತಿರುಮಾವಲವನ್ ಅವರ ಚಿತ್ರವಿತ್ತು. ಸುಮಾರು ಅರ್ಧ ಗಂಟೆ ಪ್ರತಿಭಟನೆ ನಡೆಸಿದ ಅವರು ಬಳಿಕ ಹೈಕಮಾಂಡ್‌ಗೆ ಮನವಿ ಸಲ್ಲಿಸಿದರು.
ಡಿ.ಕೆ. ಶಿವಕುಮಾರ್ ಅವರ ಬಣ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಸಮಯದಲ್ಲೇ ಈ ಪ್ರತಿಭಟನೆ ನಡೆದಿದೆ. ’2023ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತ ಗಳಿಸಲು ದಲಿತರು ಪ್ರಮುಖ ಕಾರಣ. ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಚಿವರಾದ ಕೆ.ಎಚ್.ಮುನಿಯಪ್ಪ ಜಿ.ಪರಮೇಶ್ವರ ಎಚ್.ಸಿ.ಮಹದೇವಪ್ಪ ಸತೀಶ ಜಾರಕಿಹೊಳಿ ಪೈಕಿ ಒಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಈ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು‘ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.