
ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸಾಹ ತೋರುತ್ತಿರುವ ಹೊತ್ತಿನಲ್ಲೇ, ‘ಗುಜರಾತ್ ಮಾದರಿ‘ಯಲ್ಲಿ ಸಂಪುಟ ಪುನರ್ ರಚನೆ ಆಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ ದಾಳ ಉರುಳಿಸಿದೆ.
ಸಿದ್ದರಾಮಯ್ಯ ಅವರು ಇದೇ 15ರಂದು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು 2–3 ದಿನ ಇಲ್ಲೇ ಇದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಒಪ್ಪಿಗೆ ಪಡೆಯುವ ಇರಾದೆಯಲ್ಲಿದ್ದಾರೆ. ಹೈಕಮಾಂಡ್ ನಾಯಕರ ಒಪ್ಪಿಗೆ ಸಿಕ್ಕರೆ ನವೆಂಬರ್ 26ರೊಳಗೆ ಪುನರ್ ರಚನೆ ಮಾಡುವ ಯೋಚನೆಯಲ್ಲಿದ್ದಾರೆ.
ಜಲವಿವಾದ ಬಗೆಹರಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ಹಾಗೂ ಮತಕಳವು ಅಭಿಯಾನದ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ರಾಷ್ಟ್ರ ರಾಜಧಾನಿಗೆ ಬಂದಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಬೆಳಿಗ್ಗೆ ವಾಪಸಾಗಿದ್ದಾರೆ. ಸಂಘಟನೆ ಜತೆಗೆ ರಾಜ್ಯ ಕಾಂಗ್ರೆಸ್‌ನಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ. ಶಿವಕುಮಾರ್ ಅವರು ವಾರಾಂತ್ಯದಲ್ಲಿ ಮತ್ತೆ ಬರಲಿದ್ದಾರೆ.
ನಿಷ್ಕ್ರಿಯ, ಪಕ್ಷ ಸಂಘಟನೆಗೆ ಕೊಡುಗೆ ನೀಡದ ಹಾಗೂ ಕಾರ್ಯಕರ್ತರ ಕೈಗೆ ಸಿಗದ ಸುಮಾರು 15 ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸಚಿವರ ಸಾಧನೆ ಕುರಿತು ಹೈಕಮಾಂಡ್ ವರದಿ ತರಿಸಿಕೊಂಡಿದೆ. ಸಂಪುಟ ಪುನರ್ ರಚನೆಗೆ ವೇಳೆ ’ಕಾಮರಾಜ್ ಸೂತ್ರ‘ ಅನುಸರಿಸುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಹಿರಿಯ ಸಚಿವರನ್ನು ಕೈಬಿಟ್ಟು ಅವಕಾಶ ವಂಚಿತರನ್ನು ಪರಿಗಣಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ, ಕೆ.ವೈ.ನಂಜೇಗೌಡ ಸೇರಿದಂತೆ ಹಲವರು ಧ್ವನಿ ಎತ್ತಿದ್ದಾರೆ. ಅದೇ ವೇಳೆ, ರಾಜ್ಯದಲ್ಲೂ ಗುಜರಾತ್ ಮಾದರಿ ಪುನರ್ ರಚನೆ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಬಣದವರು ಪ್ರಸ್ತಾಪಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಸಂಪುಟದ ಎಲ್ಲ 16 ಸಚಿವರಿಂದ ಕಳೆದ ತಿಂಗಳು ರಾಜೀನಾಮೆ ಪಡೆದಿದ್ದರು. ಸಂಪುಟ ವಿಸ್ತರಣೆ ವೇಳೆ ಹೊಸದಾಗಿ 19 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 16 ಜನರ ಪೈಕಿ ಆರು ಮಂದಿಯನ್ನಷ್ಟೇ ಸಂಪುಟದಲ್ಲಿ ಉಳಿಸಿಕೊಂಡಿದ್ದರು. 2027ರ ವಿಧಾನಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಟೇಲ್ ಈ ಕ್ರಮ ತೆಗೆದುಕೊಂಡಿದ್ದರು. ಗುಜರಾತ್‌ನಲ್ಲಿ ಬಿಜೆಪಿ ಎರಡು ದಶಕಗಳಿಂದ ಅಧಿಕಾರದಲ್ಲಿ ಇರುವುದು ಇಂತಹ ಪ್ರಯೋಗಗಳಿಂದಲೇ. ರಾಜ್ಯದಲ್ಲೂ ಇದೇ ಮಾದರಿ ಅನುಸರಿಸಬೇಕು. ಈ ವಿಷಯವನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊರತುಪಡಿಸಿ ಉಳಿದವರೆಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಸಾಧ್ಯವಾದಷ್ಟು ಹೊಸಬರಿಗೆ ಹಾಗೂ ಅವಕಾಶ ವಂಚಿತರಿಗೆ ಸ್ಥಾನ ಕಲ್ಪಿಸಬೇಕು. ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ ಹೊಣೆ ನಿಗದಿಪಡಿಸಬೇಕು. ಆಗ ಸಂಪುಟದಲ್ಲಿ ಹೊಸತನ ಬರಲಿದೆ. ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ‘ ಎಂದು ಅವರು ಹೇಳಿದರು.
‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಚಿವ ಸ್ಥಾನ ತ್ಯಾಗದ ಮಾತುಗಳನ್ನಾಡಿದ್ದಾರೆ. ಉಳಿದ ಹಿರಿಯ ಸಚಿವರು ಅದೇ ರೀತಿಯ ಔದಾರ್ಯ ತೋರಲಿ. ನಮಗೂ ದಾರಿ ಮಾಡಿಕೊಡಲಿ‘ ಎಂದು ಶಾಸಕರೊಬ್ಬರು ಒತ್ತಾಯಿಸಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೆಲವು ನಾಯಕರು ಆಯಕಟ್ಟಿನ ಇಲಾಖೆಗಳ ಸಚಿವರಾಗುತ್ತಿದ್ದಾರೆ. ಪಕ್ಷ ಸಂಘಟನೆಗೆ ಅವರಿಂದ ಭಾರಿ ಕೊಡುಗೆಯೇನೂ ಸಿಗುತ್ತಿಲ್ಲ. ಅಂತಹವರಿಗೆ ಕೊಕ್ ನೀಡಬೇಕು‘ ಎಂಬ ಬೇಡಿಕೆಯನ್ನು ಡಿಕೆಶಿ ಬಣ ಮುಂದಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.