ADVERTISEMENT

ನವೆಂಬರ್‌ಗೆ ಸಂಪುಟ ಪುನರ್‌ ರಚನೆ: ಸಚಿವರಿಗೆ ಇದೇ 13ರಂದು ಸಿದ್ದರಾಮಯ್ಯ ಔತಣಕೂಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 16:18 IST
Last Updated 8 ಅಕ್ಟೋಬರ್ 2025, 16:18 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಸಚಿವ ಸಂಪುಟ ಪುನರ್‌ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳಿವು ನೀಡಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿಕೊಂಡಿದೆ. ನವೆಂಬರ್ ಅಂತ್ಯದೊಳಗೆ ಸಂಪುಟ ಪುನರ್‌ ರಚನೆಯಾಗಲಿದೆ ಎಂಬ ಮಾತು ಆ ‍ಪಕ್ಷದ ವಲಯದಲ್ಲಿ ದಟ್ಟವಾಗುತ್ತಿದೆ.

ಈ ನಡುವೆ, ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಇದೇ 13ರಂದು ರಾತ್ರಿಯ ಔತಣಕೂಟ ಆಯೋಜಿಸಿದ್ದಾರೆ. ಔತಣಕೂಟದ ಕುರಿತು ಮುಖ್ಯಮಂತ್ರಿ ಸಚಿವಾಲಯದಿಂದ ಎಲ್ಲ ಸಚಿವರಿಗೆ ಸಂದೇಶ ರವಾನಿಸಲಾಗಿದೆ ಎಂದು ಗೊತ್ತಾಗಿದೆ.

ADVERTISEMENT

ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಸಂಪುಟ ಪುನರ್‌ರಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆ. ಸಚಿವರ ಪೈಕಿ 10ರಿಂದ 15 ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆದಿದೆ.

ಸಚಿವರಾಗಿದ್ದ ಬಿ. ನಾಗೇಂದ್ರ ಮತ್ತು ಕೆ.ಎನ್‌. ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ, ಹಾಲಿ ಕೆಲವು ಸಚಿವರನ್ನು ಕೈಬಿಟ್ಟು ಆಕಾಂಕ್ಷಿಗಳಿಗೆ ಸ್ಥಾನ ನೀಡಲು ಮುಖ್ಯಮಂತ್ರಿ ಕೂಡಾ ಒಲವು ಹೊಂದಿದ್ದಾರೆ. ಬುಧವಾರ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ನ. 14ರಂದು ಹೊರಬೀಳಲಿದೆ. ಡಿಸೆಂಬರ್‌ ತಿಂಗಳಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಇದರ ನಡುವೆ ಸಂಪುಟ ಪುನರ್‌ ರಚನೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದರು.

ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ದೀಪಾವಳಿ ಹಬ್ಬದ ನೆಪದಲ್ಲಿ ಸಚಿವರನ್ನು ಔತಣಕೂಟಕ್ಕೆ ಆಹ್ವಾನಿಸಲಿರುವ ಮುಖ್ಯಮಂತ್ರಿ, ಇದೇ ಸಂದರ್ಭದಲ್ಲಿ ರಾಜ್ಯ ರಾಜಕೀಯ ವಿದ್ಯಮಾನಗಳೂ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.

ಒಂದು ಕಡೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಚರ್ಚೆ ನಡೆಯುತ್ತಿದೆ. ಈ ನಡುವೆ, ‘ಮುಂದಿನ ಅವಧಿಗೂ ನಾನೇ ಸಿ.ಎಂ’ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅದರ ಜೊತೆಗೇ, ಸಂಪುಟ ಪುನರ್‌ ರಚನೆಯ ಗುಟ್ಟನ್ನೂ ಅವರು ಬಿಟ್ಟುಕೊಟ್ಟಿದ್ದಾರೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ಸುಳಿವು ನೀಡಿರುವುದು ಆಕಾಂಕ್ಷಿಗಳಲ್ಲಿ ಸಚಿವ ಸ್ಥಾನದ ಕನಸು ಚಿಗುರೊಡೆಯುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.