ಬೆಂಗಳೂರು: ದೇಶದ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ಕರ್ನಾಟಕವು ಶೇ 50ರಷ್ಟು ಪಾಲು ಹೊಂದಿದ್ದು, ‘ಯಂತ್ರೋಪಕರಣಗಳ ರಾಜಧಾನಿ’ ಎಂಬ ಪ್ರಖ್ಯಾತಿ ಪಡೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ‘ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೂಸ್ತಾನ್ ಮಷಿನ್ ಅಂಡ್ ಟೂಲ್ಸ್ (ಎಚ್‌ಎಂಟಿ) ಮೂಲಕ ಯಂತ್ರೋಪಕರಣ ಕ್ಷೇತ್ರಕ್ಕೆ ರಾಜ್ಯ ಐದು ದಶಕಗಳ ಹಿಂದೆಯೇ ಬಲಿಷ್ಠ ಅಡಿಪಾಯ ಹಾಕಿದೆ’ ಎಂದರು.
‘ತಂತ್ರಜ್ಞಾನದ ಉನ್ನತೀಕರಣ, ಕೌಶಲ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಭಾರತ ಸ್ಪಷ್ಟ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧೆ ಹೆಚ್ಚಿಸಲು ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ’ ಎಂದು ಹೇಳಿದರು.
‘ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ- 2025’ ರೂಪಿಸಲು ಕೈಗಾರಿಕೆ ಸಚಿವಾಲಯ ಮುಂದಾಗಿದೆ. ಈ ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವತ್ತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆಮದು ಮೇಲಿನ ಅವಲಂಬನೆ ಕಡಿತ, ಸ್ಪರ್ಧಾತ್ಮಕತೆ ಹೆಚ್ಚಿಸಲು ವ್ಯವಸ್ಥಿತ ಚೌಕಟ್ಟು ಒದಗಿಸುವ ಈ ನೀತಿಯು ಆದಷ್ಟು ಬೇಗ ಹೊರಬರಲಿದೆ’ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಯಂತ್ರೋಪಕರಣಗಳ ಉದ್ಯಮದ ಬಲವರ್ಧನೆಗೆ ಸರ್ಕಾರವು ನಿರ್ದಿಷ್ಟ ‘ವಿಷನ್ ಗ್ರೂಪ್’ ರಚಿಸಿದೆ’ ಎಂದರು.
‘ಮಷಿನ್ ಟೂಲ್ ವಲಯಕ್ಕಾಗಿ ‘ಮಷಿನ್ ಟೂಲ್ ಪಾರ್ಕ್’ ಅನ್ನು ರಾಜ್ಯ ಸರ್ಕಾರ ತುಮಕೂರಿನಲ್ಲಿ ಸ್ಥಾಪಿಸಿದೆ. ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ವಿದೇಶಗಳ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.