ADVERTISEMENT

ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನೀಡದವರೇ ಹೆಚ್ಚು

ನಮ್ಮ ಜಾತಿಯವರಿಗೆ ಉಪಯೋಗವಿಲ್ಲ, ಬೇರೆಯವರಿಗ್ಯಾಕೆ ಅನುಕೂಲ ಮಾಡಬೇಕು ಎನ್ನುವವರೇ ಹೆಚ್ಚು

ಜಯಸಿಂಹ ಆರ್.
Published 12 ಅಕ್ಟೋಬರ್ 2025, 23:57 IST
Last Updated 12 ಅಕ್ಟೋಬರ್ 2025, 23:57 IST
<div class="paragraphs"><p>ನಗರದ ಶ್ರೀರಾಮಪುರ ವ್ಯಾಪ್ತಿಯ ನಿವಾಸಿಯೊಬ್ಬರು ಸಮೀಕ್ಷಕರಿಗೆ ಮಾಹಿತಿ ನೀಡಿದರು </p></div>

ನಗರದ ಶ್ರೀರಾಮಪುರ ವ್ಯಾಪ್ತಿಯ ನಿವಾಸಿಯೊಬ್ಬರು ಸಮೀಕ್ಷಕರಿಗೆ ಮಾಹಿತಿ ನೀಡಿದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರವು ನಡೆಸುತ್ತಿರುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸುತ್ತಿರುವ ಹಲವು ಪ್ರಕರಣಗಳು ನಗರದಲ್ಲಿ ನಡೆದಿವೆ. ನಗರದ 19 ಬ್ಲಾಕ್‌ಗಳಲ್ಲಿ ಶೇ 62ಕ್ಕೂ ಹೆಚ್ಚು ಮಂದಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ADVERTISEMENT

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸುತ್ತಿರುವ ಸರ್ಕಾರದ ವಿವಿಧ ಇಲಾಖೆ–ಪ್ರಾಧಿಕಾರಗಳ ಸಿಬ್ಬಂದಿಯ ಜತೆಗೆ ಸಮಾಲೋಚಿಸಿದಾಗ ಈ ಮಾಹಿತಿ ದೊರೆಯಿತು. ಸಮೀಕ್ಷೆಗೆ ಸಂಬಂಧಿಸಿದ ದತ್ತಾಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅವುಗಳನ್ನು ಪರಿಶೀಲಿಸಿದಾಗ ಈ ಅಂಶ ದೃಢಪಟ್ಟಿತು.

ಸಮೀಕ್ಷೆಗಾಗಿ ನಗರದ ವ್ಯಾಪ್ತಿಯಲ್ಲಿರುವ ಪ್ರತಿ 150 ಮನೆಗಳನ್ನು ಒಂದು ಬ್ಲಾಕ್‌ ಆಗಿ ವರ್ಗೀಕರಿಸಲಾಗಿದೆ. ಜಯನಗರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಬರುವ ವಿವಿಧ, 19 ಬ್ಲಾಕ್‌ಗಳಲ್ಲಿ ಶನಿವಾರ ಸಂಜೆವರೆಗೆ ಒಟ್ಟು 2,923 ಮನೆಗಳಿಗೆ ಸಮೀಕ್ಷಕರು ಭೇಟಿ ನೀಡಿದ್ದಾರೆ. ಈ ಪೈಕಿ 1,756 ಮನೆಯವರು ‘ನಾವು ಮಾಹಿತಿ’ ನೀಡುವುದಿಲ್ಲ ಎಂದಿದ್ದಾರೆ.

ಈ ಬ್ಲಾಕ್‌ಗಳಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿರುವುದು 920 ಮನೆಗಳಲ್ಲಿ ಮಾತ್ರ. 

ಜಯನಗರ ವ್ಯಾಪ್ತಿಯ ಬ್ಲಾಕ್‌ನಲ್ಲಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ 120 ಫ್ಲಾಟ್‌ಗಳಿದ್ದು, ಎಲ್ಲ ಫ್ಲ್ಯಾಟ್‌ನವರೂ ಮಾಹಿತಿ ನೀಡುವುದಿಲ್ಲ ಎಂದಿದ್ದಾರೆ. ‘ಈ ಅಪಾರ್ಟ್‌ಮೆಂಟ್‌ನಲ್ಲಿ ಪ್ರಬಲ ಜಾತಿ– ಸಮುದಾಯದವರೇ ಇದ್ದು, ‘ನಮ್ಮ ಜಾತಿಯವರಿಗೆ ಇದರಿಂದ ಉಪಯೋಗವಿಲ್ಲ. ಬೇರೆ ಯಾವುದೋ ಜಾತಿಯವರಿಗೆ ಮೀಸಲಾತಿ ಹೆಚ್ಚಳ ಮಾಡಲು ನಮ್ಮ ಮಾಹಿತಿ ಏಕೆ ನೀಡಬೇಕು’ ಎಂದು ಪ್ರಶ್ನಿಸಿದರು’ ಎಂದು ಸಮೀಕ್ಷಕ–ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಬೊಮ್ಮನಹಳ್ಳಿ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ 450 ಫ್ಲ್ಯಾಟ್‌ಗಳಿದ್ದು, ಸಮೀಕ್ಷಕರನ್ನು ಅಪಾರ್ಟ್‌ಮೆಂಟ್‌ನ ಒಳಗೇ ಬಿಟ್ಟಿಲ್ಲ. ‘ಅಪಾರ್ಟ್‌ಮೆಂಟ್‌ ಮ್ಯಾನೇಜ್‌ಮೆಂಟ್‌, ‘ಯಾವ ಫ್ಲ್ಯಾಟ್‌ನವರೂ ನಿಮಗೆ ಮಾಹಿತಿ ನೀಡಲು ಸಿದ್ಧರಿಲ್ಲ. ಮತ್ತೆ ಇಲ್ಲಿಗೆ ಬರಬೇಡಿ’ ಎಂದು ತಾಕೀತು ಮಾಡಿದರು. ಒಟ್ಟು ಮೂವರು ಸಮೀಕ್ಷಕರನ್ನು ಈ ಅಪಾರ್ಟ್‌ಮೆಂಟ್‌ಗೆ ನಿಯೋಜನೆ ಮಾಡಿದ್ದರು. ಮೂವರ ಸಮೀಕ್ಷಾ ಪ್ರಗತಿ ಶೂನ್ಯ’ ಎಂದು ಕಂದಾಯ ಇಲಾಖೆಯಿಂದ ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯೊಬ್ಬರು ತಮ್ಮ ಅಸಹಾಯಕತೆ ಹೇಳಿಕೊಂಡರು.

‘ಸಮೀಕ್ಷೆಗೆ ಮಾಹಿತಿ ನೀಡಬೇಡಿ ಎಂದು ಪ್ರಮುಖ ರಾಜಕೀಯ ಪಕ್ಷವೊಂದು ನಮ್ಮ ವ್ಯಾಪ್ತಿಯ ಪ್ರತಿ ಮನೆಗೂ ಕರಪತ್ರಗಳನ್ನು ಹಂಚಿದೆ. ಹೀಗಾಗಿ ಬಹುತೇಕ ಮಂದಿ ಮಾಹಿತಿ ನೀಡುವುದಿಲ್ಲ ಎಂದೇ ಹೇಳುತ್ತಿದ್ದಾರೆ.  ನಮ್ಮನ್ನು ಮನೆಯ ಬಳಿಗೂ ಬಿಟ್ಟುಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರದ ಜಾತಿಗಣತಿಗೆ ಮಾಹಿತಿ ನೀಡುತ್ತೇವೆ, ನಿಮಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಹಲವು ಸಮೀಕ್ಷಕರು ಹೇಳುತ್ತಿದ್ದಾರೆ’ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೇಲ್ವಿಚಾರಕರೊಬ್ಬರು ವಿವರಿಸಿದರು.

‘ಬಿಪಿಎಲ್‌ ರದ್ದಾಗುತ್ತದೆಂದು ಅಪಪ್ರಚಾರ’

ಪರಿಶೀಲನೆಗೆ ಆಯ್ದುಕೊಳ್ಳಲಾದ ಈ 19 ಬ್ಲಾಕ್‌ಗಳ ಪೈಕಿ ಮೂರರಲ್ಲಿ ದೊಡ್ಡ–ದೊಡ್ಡ ಕೊಳೆಗೇರಿಗಳಿವೆ. ಇಲ್ಲಿಯ ನಿವಾಸಿಗಳೂ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಸಮೀಕ್ಷಕರು ತಿಳಿಸಿದರು. ‘ಈ ಕೊಳೆಗೇರಿಗಳಲ್ಲಿ ಬಹುಪಾಲು ಮಂದಿ ಪರಿಶಿಷ್ಟ ಜಾತಿ ಸಮುದಾಯದವರೇ ಇದ್ದಾರೆ. ಒಳಮೀಸಲಾತಿ ಸಂಬಂಧ ನಡೆಸಿದ ಸಮೀಕ್ಷೆಗೆ ಇಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದರು. ಆದರೆ ಈಗ ಮಾಹಿತಿ ನೀಡುತ್ತಿಲ್ಲ. ಎಲ್ಲರೂ ‘ಇದಕ್ಕೆ ಮಾಹಿತಿ ನೀಡಿದರೆ ನಮ್ಮ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತದೆಯಂತೆ. ಹೀಗಾಗಿ ನೀಡುವುದಿಲ್ಲ’ ಎನ್ನುತ್ತಿದ್ದಾರೆ’ ಎಂದು ರಾಜರಾಜೇಶ್ವರಿನಗರ ವ್ಯಾಪ್ತಿಯ ಸಮೀಕ್ಷಕರೊಬ್ಬರು ಮಾಹಿತಿ ನೀಡಿದರು. ಸಮೀಕ್ಷೆಗೆ ಮಾಹಿತಿ ನೀಡಿದರೆ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತದೆ ಎಂದು ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಈ ಕಾರಣದಿಂದ ನಮಗೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲು ಸರ್ಕಾರಕ್ಕೆ ತಿಳಿಸಿ ಎಂದು ಜಿಬಿಎ ವ್ಯಾಪ್ತಿಯ ಹಲವು ಕಂದಾಯ ಅಧಿಕಾರಿಗಳಿಗೆ (ಆರ್‌ಒ) ಸಮೀಕ್ಷಕರು ಸಮೀಕ್ಷಾ ಮೇಲ್ವಿಚಾರಕರು ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.