ADVERTISEMENT

‘ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗುತ್ತಿದ್ದರು...’: ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ

ಲೈಂಗಿಕ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 20:05 IST
Last Updated 9 ನವೆಂಬರ್ 2022, 20:05 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ‘ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ರಾತ್ರಿ ವೇಳೆ ಬೆಡ್‌ರೂಂಗೆ ಕರೆಸಿಕೊಳ್ಳುತ್ತಿದ್ದರು. ಚಾಕೊಲೇಟ್‌ ರೂಪದ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸುತ್ತಿದ್ದರು. ಲೈಂಗಿಕ ಬಲಾತ್ಕಾರ ಎಸಗಿ ದೈಹಿಕ ಆಸೆ ತೀರಿಸಿಕೊಳ್ಳುತ್ತಿದ್ದರು. ಎಚ್ಚರವಾದ ಬಳಿಕ ಬೆದರಿಕೆ ಹಾಕುತ್ತಿದ್ದರು...’

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದು ಹೀಗೆ.

ಅತ್ಯಾಚಾರ ಆರೋಪ, ಪೋಕ್ಸೊ, ಎಸ್‌.ಸಿ ಮತ್ತು ಎಸ್‌.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯನ್ನು ಪೊಲೀಸರು ಭಾಗಶಃ ಪೂರ್ಣಗೊಳಿಸಿದ್ದಾರೆ.

ADVERTISEMENT

‘2018ರಲ್ಲಿ 7ನೇ ತರಗತಿಗೆ ಪ್ರವೇಶ ಪಡೆದಿದ್ದ 17 ವರ್ಷದ ಸಂತ್ರಸ್ತೆಯು, ಮಠದ ಆವರಣದಲ್ಲಿದ್ದ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದಳು. ಮಠದ ಪೀಠಾಧ್ಯಕ್ಷರಾಗಿರುವ ಪ್ರಕರಣದ ಮೊದಲ ಆರೋಪಿಯು ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬದ ಮೇಲೆ ಅನುಕಂಪ ತೋರಿ ಗೌರವ ಹಾಗೂ ವಿಶ್ವಾಸ ಗಳಿಸುತ್ತಿದ್ದರು. ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ರಾತ್ರಿ ವೇಳೆ ಒಬ್ಬರೇ ಇರುವ ಸಂದರ್ಭದಲ್ಲಿ ಬೆಡ್‌ರೂಂಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಳ್ಳುತ್ತಿದ್ದರು. 2018 ಮತ್ತು 2020ರಲ್ಲಿ ಹಲವು ಬಾರಿ ಹೀಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ’ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

‘16 ವರ್ಷದ ಮತ್ತೊಬ್ಬ ಸಂತ್ರಸ್ತ ವಿದ್ಯಾರ್ಥಿನಿಯನ್ನು 2021 ಹಾಗೂ 2022ರಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. 2ನೇ ಆರೋಪಿಯಾಗಿರುವ ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ಹಾಗೂ 4ನೇ ಆರೋಪಿಯಾದ ಮಠದ ವ್ಯವಸ್ಥಾಪಕ ಪರಮಶಿವಯ್ಯ ಈ ಕೃತ್ಯಕ್ಕೆ ಸಹಕರಿಸಿದ್ದಾರೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ’ ಎಂಬ ಅಂಶ ದೋಷಾರೋಪ ಪಟ್ಟಿಯಲ್ಲಿದೆ.

ಪ್ರತ್ಯೇಕ ದೋಷಾರೋಪ ಪಟ್ಟಿ ಏಕೆ?: ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಅ.27ರಂದು ಎರಡು ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 331 ಹಾಗೂ 347 ಪುಟಗಳ ಎರಡು ಪ್ರತ್ಯೇಕ ದೋಷಾರೋಪ ಪಟ್ಟಿಯ ಬಗ್ಗೆ ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಯಡಿ ಒಬ್ಬ ಬಾಲಕಿ ಬರುವುದರಿಂದ ಪ್ರತ್ಯೇಕ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದಾಗಿ ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದರು.

84 ಸಾಕ್ಷ್ಯಗಳ ಸಂಗ್ರಹ: ಪ್ರಕರಣದ ತನಿಖೆ ನಡೆಸಿದ ಪೊಲೀಸರು 84 ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಮಠದಲ್ಲಿ ಕೆಲಸ ಮಾಡುವವರು, ಶಿಕ್ಷಕಿಯರು, ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿದವರೂ ಸೇರಿದಂತೆ ಹಲವರು ತನಿಖೆಯ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲ ಸಾಕ್ಷಿಗಳ ಹೆಸರು ಸಹಿತ ವಿವರವನ್ನು ತನಿಖಾಧಿಕಾರಿ ದೋಷಾರೋಪ ಪಟ್ಟಿ ಯೊಂದಿಗೆ ನ್ಯಾಯಾಲಯಕ್ಕೆ ನೀಡಿದ್ದಾರೆ.

‘ಬಟ್ಟೆ ಬಿಚ್ಚಿಸಿ ತಬ್ಬಿಕೊಳ್ಳುತ್ತಿದ್ದರು..’
‘ರಾತ್ರಿ ಟ್ಯೂಷನ್‌ ಅವಧಿ ಮುಗಿದ ಬಳಿಕ, ಕಸ ಗುಡಿಸುವ ನೆಪದಲ್ಲಿ ನಮ್ಮನ್ನು ಕೊಠಡಿಯಲ್ಲಿ ಉಳಿಸಿಕೊಳ್ಳುತ್ತಿದ್ದರು. ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು ನೀಡುತ್ತಿದ್ದರು. ಬಟ್ಟೆ ಬಿಚ್ಚಲು ಹೇಳಿ ತಬ್ಬಿಕೊಳ್ಳುತ್ತಿದ್ದರು....’

ಸಂತ್ರಸ್ತ ವಿದ್ಯಾರ್ಥಿನಿಯೊಬ್ಬರು ತನಿಖಾಧಿಕಾರಿ ಎದುರು ನೀಡಿದ ಹೇಳಿಕೆ ಇದು. ಆರೋಪಿ ಮದ್ಯ ಸೇವನೆ ಮಾಡುತ್ತಿದ್ದರು, ಬೆನ್ನು ಉಜ್ಜಿಸಿಕೊಳ್ಳುವ ನೆಪದಲ್ಲಿ ಸ್ನಾನದ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು ಎಂಬ ಸಂಗತಿಯನ್ನು ಸಂತ್ರಸ್ತೆ ತಿಳಿಸಿದ್ದಾಳೆ.

‘ಕೊಠಡಿಗೆ ಯಾರು ಹೋಗಬೇಕು ಎಂಬ ಚೀಟಿಯನ್ನು ಶಿವಮೂರ್ತಿ ಮುರುಘಾ ಶರಣರು ಮಹಿಳಾ ವಾರ್ಡನ್‌ಗೆ ನೀಡುತ್ತಿದ್ದರು. ಆ ಪ್ರಕಾರವಾಗಿ ಒಬ್ಬೊಬ್ಬರು ಒಂದೊಂದು ದಿನ ತೆರಳಬೇಕಿತ್ತು. ಒಂದು ವೇಳೆ ಹೋಗದೇ ಇದ್ದರೆ ಎಲ್ಲರನ್ನೂ ಶಿಕ್ಷೆಗೆ ಗುರಿ ಮಾಡಲಾಗುತ್ತಿತ್ತು’ ಎಂದು ಬಾಲಕಿ ಹೇಳಿದ್ದಾಳೆ.

ಮೂವರ ವಿರುದ್ಧ ದೋಷಾರೋಪ
ಸಂತ್ರಸ್ತ ವಿದ್ಯಾರ್ಥಿನಿಯರು ಐವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಯ ಸಂದರ್ಭದಲ್ಲಿ ಮೂವರ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯ ಲಭ್ಯವಾಗಿವೆ.

ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು, ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ಹಾಗೂ ಮಠದ ವ್ಯವಸ್ಥಾಪಕ ಪರಮಶಿವಯ್ಯ ಅವರ ವಿರುದ್ಧದ ಆರೋಪಕ್ಕೆ ತನಿಖೆಯಲ್ಲಿ ಸಾಕ್ಷ್ಯಗಳು ದೊರೆತಿವೆ. 17 ವರ್ಷದ ಬಾಲಕ ಹಾಗೂ ಗಂಗಾಧರಯ್ಯ ಎಂಬುವವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ ಎಂಬುದಾಗಿ ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿ ಉಲ್ಲೇಖಿಸಿದ್ದಾರೆ.

‘ಧಾರ್ಮಿಕ ಸಂಸ್ಥೆ ದುರ್ಬಳಕೆ’
ಮಠದ ಆವರಣದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಶಿವಮೂರ್ತಿ ಮುರುಘಾ ಶರಣರು ಧಾರ್ಮಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಧಾರ್ಮಿಕ ಸಂಸ್ಥೆಯ ದುರ್ಬಳಕೆ ತಡೆ ಕಾಯ್ದೆಯ ಸೆಕ್ಷನ್‌– 3 (ಎಫ್‌) ಮತ್ತು ಸೆಕ್ಷನ್‌– 7ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ಅಡಿಯಲ್ಲಿ ದೋಷಾರೋಪ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.