ADVERTISEMENT

ಸಿನಿಮಾ ಟಿಕೆಟ್‌ ಏಕರೂಪ ದರ ನಿಗದಿ ತಡೆ ಕೋರಿಕೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 15:53 IST
Last Updated 16 ಸೆಪ್ಟೆಂಬರ್ 2025, 15:53 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ ₹200 ಮೊತ್ತದ ಏಕರೂಪ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕು’ ಎಂಬ ಮಧ್ಯಂತರ ಮನವಿಯ ಕುರಿತಾದ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಟಿಕೆಟ್‌ ದರ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಕರ್ನಾಟಕ ಸಿನಿಮಾ, ನಿಯಂತ್ರಣ ಮತ್ತು ತಿದ್ದುಪಡಿ ನಿಯಮಗಳು-2025' ಅನ್ನು ಪ್ರಶ್ನಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

‘ರಿಟ್‌ ಅರ್ಜಿ ಇತ್ಯರ್ಥವಾಗುವತನಕ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕು’ ಎಂಬ ಮಧ್ಯಂತರ ಮನವಿಗೆ ಸಂಬಂಧಿಸಿದಂತೆ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಇದೇ 23ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ದರ ನಿಗದಿ ಕುರಿತಾದ ನಿಯಮಗಳನ್ನು ಪ್ರಶ್ನಿಸಿ, ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಶಂತನು ಪೈ, ಕೀಸ್ಟೋನ್ ಎಂಟರ್‌ಟೈನ್‌ಮೆಂಟ್‌ ಹಾಗೂ ವಿ.ಕೆ.ಫಿಲ್ಮ್ಸ್‌ ಈ ರಿಟ್‌ ಅರ್ಜಿಗಳನ್ನು ಸಲ್ಲಿಸಿವೆ.

ಅರ್ಜಿಯಲ್ಲಿ ಏನಿದೆ?: ‘ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂದಿರಗಳಿಗೆ ₹200 ನಿಗದಿಪಡಿಸಿರುವ ಸರ್ಕಾರದ ನಿರ್ಧಾರ ಏಕಪಕ್ಷೀಯ, ಕಾನೂನು ಬಾಹಿರ ಮತ್ತು ವಿವೇಚನಾರಹಿತವಾಗಿದೆ. ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಸರ್ಕಾರ 2017ರಲ್ಲಿಯೂ ಇದೇ ರೀತಿಯ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದ ನಂತರ ಆ ಆದೇಶವನ್ನು ವಾಪಸ್‌ ಪಡೆಯಲಾಗಿತ್ತು’ ಎಂಬುದನ್ನು ಅರ್ಜಿದಾರರು ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.