ADVERTISEMENT

ಮರೆಯಾಗುತ್ತಿರುವ ಅಂತಃಕರಣ: ಸಿಎಂ ಬೊಮ್ಮಾಯಿ ಕಳವಳ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 20:45 IST
Last Updated 2 ಆಗಸ್ಟ್ 2022, 20:45 IST
’ಸಾಹಿತ್ಯಮುಖಿ‘ ಮತ್ತು ’ಸಮಾಜಮುಖಿ‘ ಪುಸ್ತಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. (ಎಡದಿಂದ) ಸಾಹಿತಿಗಳಾದ ದೊಡ್ಡರಂಗೇಗೌಡ, ಚಂದ್ರಶೇಖರ ಕಂಬಾರ, ಡಿ.ಎಸ್‌.ವೀರಯ್ಯ, ಶಿವಮೂರ್ತಿ ಮುರುಘಾ ಶರಣರು, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇದ್ದರು - – -ಪ್ರಜಾವಾಣಿ ಚಿತ್ರ
’ಸಾಹಿತ್ಯಮುಖಿ‘ ಮತ್ತು ’ಸಮಾಜಮುಖಿ‘ ಪುಸ್ತಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. (ಎಡದಿಂದ) ಸಾಹಿತಿಗಳಾದ ದೊಡ್ಡರಂಗೇಗೌಡ, ಚಂದ್ರಶೇಖರ ಕಂಬಾರ, ಡಿ.ಎಸ್‌.ವೀರಯ್ಯ, ಶಿವಮೂರ್ತಿ ಮುರುಘಾ ಶರಣರು, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇದ್ದರು - – -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಫಲವಾಗಿ ಭಾರತದಲ್ಲಿ ಅಂತಃಕರಣ ಮರೆಯಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದರು.

ಡಿ.ಎಸ್‌.ವಿ ಫೌಂಡೇಷನ್ ಆಯೋಜಿಸಿದ್ದ ಡಿ.ಎಸ್.ವೀರಯ್ಯ ಅವರ ‘ಸಾಹಿತ್ಯಮುಖಿ’ ಮತ್ತು ‘ಸಮಾಜಮುಖಿ’ ಸಂಪುಟಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘90ರ ದಶಕದಲ್ಲಿ ‌ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಒಪ್ಪಿಕೊಂಡ ಬಳಿಕ ದೇಶದ ರಾಜಕಾರಣ, ಆಡಳಿತ, ಸಾಹಿತ್ಯ ಸೇರಿ ಎಲ್ಲ ವಲಯಗಳ ಆದ್ಯತೆ ಬದಲಾಗಿದೆ. ಮಾನವೀಯ ಮೌಲ್ಯವೇ ಕಡಿಮೆಯಾಗುತ್ತಿದೆ. ಹೊರದೇಶಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿನ ಸತ್ವ ಉಳಿದಿದ್ದರೆ ಅದಕ್ಕೆ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸ ಕಾರಣ’ ಎಂದರು.

ADVERTISEMENT

‘ಚಳವಳಿಗೆ ಸಾಹಿತ್ಯದ ಸ್ವರೂಪ ಇದ್ದರೆ ಅದರಲ್ಲಿ ನೀತಿ ಇರುತ್ತದೆ. ಮಹತ್ವಾಕಾಂಕ್ಷೆಯ ಗುರಿ ಇರುತ್ತದೆ. ಚಳವಳಿ ಮತ್ತು ಸಾಹಿತ್ಯವನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋದ ಕೀರ್ತಿ ಡಿ.ಎಸ್.ವೀರಯ್ಯ ಅವರಿಗೆ ಸಲ್ಲುತ್ತದೆ. ದಮನಿತರ ಧ್ವನಿಯಾಗಿ ಕಠಿಣ ಹಾದಿ ಸವೆಸಿದ್ದಾರೆ. ಅವರಿಗೆ ದೆಹಲಿ ರಾಜಕಾರಣದ ಅವಕಾಶ ತಪ್ಪಿದೆ. ಮುಂದೊಂದು ದಿನ ಬೇರೆ ಅವಕಾಶ ಸಿಗಲಿದ್ದು, ಅದಕ್ಕೆ ಒತ್ತಾಸೆಯಾಗಿ ನಾನೂ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.

ಬಿಡುಗಡೆಯಾದ ಕೃತಿಗಳ ಕುರಿತು ಮಾತನಾಡಿದ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ‘ಡಿ.ಎಸ್.ವೀರಯ್ಯ ಅವರ ಕೃತಿಗಳಲ್ಲಿ ಕಥೆ, ಕವಿತೆ, ಆತ್ಮಕಥೆ, ವ್ಯಕ್ತಿಚಿತ್ರ ಎಲ್ಲವೂ ಇವೆ. 40 ವರ್ಷಗಳ ಅವರ ಬರಹವನ್ನು ಸಾಹಿತ್ಯ ವಲಯ ಗುರುತಿಸಲೇ ಇಲ್ಲ. ಅವರ ಸಾಹಿತ್ಯದಲ್ಲಿ ಅಂತಃಕರಣ ಇದೆ ಎಂಬುದನ್ನು ಈಗಲಾದರೂ ಸಾರಸ್ವತಲೋಕ ಗುರುತಿಸಬೇಕಿದೆ’ ಎಂದರು.

ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಜನರ ನಡುವೆ ಹೋರಾಟಗಳಲ್ಲಿ ಬೆಳೆದ ಡಿ.ಎಸ್.ವೀರಯ್ಯ ಅವರು ಸಮಾಜವನ್ನೇ ಓದುತ್ತಾ ಬೆಳೆದವರು. ಅನುಭವ ಮುಖಿಯಾಗಿದ್ದರಿಂದ ‘ಸಮಾಜಮುಖಿ’ ಮತ್ತು ‘ಸಾಹಿತ್ಯಮುಖಿ’ ಗ್ರಂಥಗಳನ್ನು ರಚಿಸಲು ಸಾಧ್ಯವಾಯಿತು. ಅವರ ಬರಹಗಳನ್ನು ಯುವ ಸಮೂಹ ಓದಿದರೆ ಅರಿವು ಹೆಚ್ಚಿಸಿಕೊಳ್ಳಲು ಸಾಧ್ಯ’
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.