ADVERTISEMENT

‘ಸುಪ್ರೀಂ’ ಮೊರೆ ಹೋದ ಯಡಿಯೂರಪ್ಪ: ನಾಳೆ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 20:16 IST
Last Updated 26 ಜನವರಿ 2021, 20:16 IST
ಮುರುಗೇಶ ನೀರಾಣಿ, ಬಿಎಸ್‌ ಯಡಿಯೂರಪ್ಪ
ಮುರುಗೇಶ ನೀರಾಣಿ, ಬಿಎಸ್‌ ಯಡಿಯೂರಪ್ಪ    

ನವದೆಹಲಿ: ತಮ್ಮ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್‌ ನಿರಾಣಿ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯಮ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಬುಧವಾರ ನಡೆಸಲಿದೆ.

2010–11ರಲ್ಲಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಯೋಜನೆಗೆ 26 ಎಕರೆ ಭೂಮಿ ಮಂಜೂರು ಮಾಡಿ ನಂತರ ನಕಲಿ ದಾಖಲೆ ಹಾಗೂ ನಕಲಿ ಸಹಿ ಬಳಸಿ ಆ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ತಮ್ಮಿಂದ ಹಿಂದಕ್ಕೆ ಪಡೆದಿದ್ದಾಗಿ ಉದ್ಯಮಿ ಎ.ಅಲಂ ಪಾಷಾ ಅವರು ಆರೋಪಿಸಿದ್ದರು. ಈ ಸಂಬಂಧ ಅವರು ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ADVERTISEMENT

ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 5ರಂದು ವಜಾಗೊಳಿಸಿದ್ದ ಹೈಕೋರ್ಟ್‌, ವಿಚಾರಣೆ ನಡೆಸುವಂತೆಯೂ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.