ADVERTISEMENT

ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲೂ ಭದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:03 IST
Last Updated 21 ನವೆಂಬರ್ 2025, 0:03 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

ಚಾಮರಾಜನಗರ: ‘ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ. ಜನರು ಎಲ್ಲಿಯವರೆಗೆ ಅಪೇಕ್ಷಿಸುವರೋ, ಅಲ್ಲಿಯವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಇಲ್ಲಿ ಗುರುವಾರ ಮಾತನಾಡಿದ ಅವರು, ‘ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮಂತ್ರಿ ಸ್ಥಾನ ಹೋಗುತ್ತದೆ ಎಂಬ ಮೌಢ್ಯ ಇತ್ತು. ಇಲ್ಲಿಗೆ 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದು ಬಂದಾಗಲೆಲ್ಲ ಮುಖ್ಯಮಂತ್ರಿ ಕುರ್ಚಿ ಗಟ್ಟಿಯಾಗಿದೆ. ಜೊತೆಗೆ ಪಕ್ಷದ ಅಧಿಕಾರವೂ ಗಟ್ಟಿಯಾಗುತ್ತಲೇ ಇದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಎರಡೂವರೆ ವರ್ಷದ ಬಳಿಕ ಸಂಪುಟ ಪುನರ್‌ರಚನೆ ಮಾಡಬಹುದು ಎಂದು ಹೈಕಮಾಂಡ್ ಹೇಳಿದ ನಂತರವಷ್ಟೇ,  ಮುಖ್ಯಮಂತ್ರಿ ಬದಲಾವಣೆಯ ವಿಷಯ ಮುನ್ನಲೆಗೆ ಬಂದಿದೆ’ ಎಂದೂ ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಬಗ್ಗೆ ಡಿ.ಕೆ. ಸುರೇಶ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ  ಉತ್ತರಿಸಿದ ಸಿದ್ದರಾಮಯ್ಯ, ‘ಅದಕ್ಕೆಲ್ಲ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷ ಆಡಳಿತ ನಡೆಸಲು ಜನಾದೇಶ ಇದೆ. ಜನರ ಆಸೆಯಂತೆ ಐದು ವರ್ಷ ಸರ್ಕಾರ ನಡೆಸಿ ನಂತರವೂ ಪುನಃ ಕಾಂಗ್ರೆಸ್ ಪಕ್ಷವೇ ಆಯ್ಕೆಯಾಗಿ ಬರಲಿದೆ’ ಎಂದರು.

‘2028ರಲ್ಲಿಯೂ ನಿಮ್ಮ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆಯೇ’ ಎಂಬುದಕ್ಕೆ ‘ಈ ಬಗ್ಗೆ ಭವಿಷ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜನರು ಅ‍ಪೇಕ್ಷಿಸುವವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಸಂಪುಟ ಪುನಾರಚನೆ ವಿಚಾರದಲ್ಲಿ ಗೊಂದಲ ಇಲ್ಲ. ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ತಿಳಿಸಲಿದ್ದಾರೆ. ಸಂಪುಟದಲ್ಲಿದ್ದ 34 ಸಚಿವರ ಸ್ಥಾನಗಳ ಪೈಕಿ ಕೆ.ಎನ್‌.ರಾಜಣ್ಣ ಹಾಗೂ ಬಿ.ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಎರಡು ಸ್ಥಾನಗಳನ್ನು ಪುನಾರಚನೆ ವೇಳೆ ಭರ್ತಿ ಮಾಡಲಾಗುವುದು’ ಎಂದರು.

ಜಿಟಿಡಿ ನಮ್ಮ ಜತೆಗೇ ಇದ್ದಾರೆ:

ಬಳಿಕ ಇಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸಹಕಾರಿ ಚಳವಳಿಯಲ್ಲಿದ್ದ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲಿದ್ದರೂ ನನ್ನ ಪರವಾಗಿಯೇ ಇದ್ದಾರೆ. ಪಕ್ಷದಿಂದ ನನ್ನನ್ನು ಉಚ್ಚಾಟಿಸಿದ ಮೇಲೆ ಅವರು ಅಲ್ಲಿಯೇ ಉಳಿದುಬಿಟ್ಟರು. ಈಗ ಒಂದು ರೀತಿಯಲ್ಲಿ ನಮ್ಮ ಜೊತೆಗೇ ಇದ್ದಾರೆ’ ಎಂದರು.

‘ನಾನು ಜೆಡಿಎಸ್‌ನಲ್ಲಿ ಇದ್ದಿದ್ದರೆ  ದೇವೇಗೌಡರು ಹಾಗೂ ಅವರ ಮಕ್ಕಳು ಮುಖ್ಯಮಂತ್ರಿಯಾಗಲು ಬಿಡುತ್ತಿರಲಿಲ್ಲ. ಕಾಂಗ್ರೆಸ್‌ ಸೇರಿದ ಬಳಿಕ ಎರಡು ಬಾರಿ ಮುಖ್ಯಮಂತ್ರಿಯಾದೆ’ ಎಂದು ಅವರು ಹೇಳಿದರು.

‘ನೇಮಕಾತಿಯಲ್ಲಿ ಸಹಕಾರ ಪದವೀಧರರಿಗೆ ಆದ್ಯತೆ’

‘ಸಹಕಾರ ಸಂಘಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಸಹಕಾರ ವಿಷಯದಲ್ಲಿ ಡಿಪ್ಲೊಮಾ ಹಾಗೂ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಹಾಗೂ ಪಠ್ಯದಲ್ಲಿ ಸಹಕಾರ ತತ್ವದ ವಿಚಾರಗಳನ್ನು ಅಳವಡಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಪ್ರತಿ ಗ್ರಾಮದಲ್ಲಿ ಶಾಲೆ ಗ್ರಾಮ ಪಂಚಾಯಿತಿ ಸಹಕಾರ ಸಂಘಗಳು ಇರ ಬೇಕೆಂಬುದು ನೆಹರೂ ನಿಲುವಾಗಿತ್ತು. ಅವರ ದೂರದೃಷ್ಟಿಯ ಪರಿಣಾಮ ‌ದೇಶದಲ್ಲಿ ಸಹಕಾರ ಚಳವಳಿ ಬಲಗೊಂಡಿದ್ದರಿಂದ ನೆಹರೂ ಜನ್ಮದಿನವೇ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.