ವಿಜಯೇಂದ್ರ
(ಸಂಗ್ರಹ ಚಿತ್ರ)
ಬೆಂಗಳೂರು: ‘ರೈತರ ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯವಾಗದ ಸರ್ಕಾರ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯಲ್ಲಿ ಮುಳುಗಿದೆ. ಕಾಂಗ್ರೆಸ್ ನಾಯಕರ ಕಿತ್ತಾಟಕ್ಕೆ ಜನರು ಬೇಸತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಹೇಳುವ ಸ್ಥಿತಿ ಬಂದಿದೆ. ಆಡಳಿತ ಪಕ್ಷದಲ್ಲೇ ಮುಖ್ಯಮಂತ್ರಿ ಬಗ್ಗೆ ವಿಶ್ವಾಸ ಹೊರಟು ಹೋಗಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಹೇಳಿಕೆಗಳನ್ನು ನಿಲ್ಲಿಸದೆ ಹೋದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಒಪ್ಪಿಕೊಂಡಿದ್ದಾರೆ’ ಎಂದು ಟೀಕಿಸಿದರು.
‘ರಾಜ್ಯದ ಜನರಿಗೆ ಮುಖ್ಯಮಂತ್ರಿ ಯಾರು ಆಗುತ್ತಾರೆ? ಬದಲಾಗುತ್ತಾರಾ ಎಂಬ ಬಗ್ಗೆ ಆಸಕ್ತಿ ಇಲ್ಲ. ಇವರ ಒಳ ಜಗಳದಿಂದ ಕೆಪಿಸಿಸಿ ಕಚೇರಿಗೆ ಬೀಗ ಹಾಕುವುದು ಇರಲಿ, ರಾಜ್ಯದ ಖಜಾನೆಗೆ ಬೀಗ ಹಾಕಿ ಕೂತಿದ್ದಾರೆ. ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ಮುಖ್ಯಮಂತ್ರಿಯೇ ದೂಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.