ಬೆಂಗಳೂರು: ‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ₹32 ಸಾವಿರ ಕೋಟಿ ಮೊತ್ತದ ಬಿಲ್ ಪಾವತಿ ಬಾಕಿ ಉಳಿದಿದ್ದು, ಮುಖ್ಯಮಂತ್ರಿಯವರು ನೀಡಿದ ಭರವಸೆಯೂ ಈಡೇರಿಲ್ಲ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಆರೋಪಿಸಿದರು.
‘2021-22ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಬಿಲ್‌ಗಳು ಪಾವತಿಯಾಗಿಲ್ಲ’ ಎಂದು ದೂರಿದರು.
‘2025ರ ಏಪ್ರಿಲ್‌ನಲ್ಲಿ, ಬಾಕಿ ಇರುವ ಬಿಲ್‌ಗಳ ಪೈಕಿ ಶೇ 50ರಷ್ಟು ಹಣ ಬಿಡಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ವಾಸನೆ ನೀಡಿದ್ದರು. ಆದರೆ, ಹಣ ಬಿಡುಗಡೆ ಆಗುತ್ತಿಲ್ಲ. ಅವರಿಗೆ ಮತ್ತೆ ಮನವಿ ಸಲ್ಲಿಸಲು ಹಲವು ಬಾರಿ ಸಭೆ ನಿಗದಿಯಾದರೂ, ಅದನ್ನು ರದ್ದು ಮಾಡಲಾಯಿತು’ ಎಂದರು.
‘ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಗಳ ಬಾಕಿ ಬಿಲ್ ಪಾವತಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಮಂಜುನಾಥ್ ಆರೋಪಿಸಿದರು.
‘ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಬೋಸರಾಜು, ಜಮೀರ್ ಅಹಮದ್ ಖಾನ್ ಅವರು ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆಶ್ವಾಸನೆ ಕೊಟ್ಟರು. ಇದರಲ್ಲಿ ಕೆಲವು ಬೇಡಿಕೆಗಳಷ್ಟೇ ಈಡೇರಿವೆ’ ಎಂದರು.
‘ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ನಡೆದ ಸಭೆಯಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಬಿಲ್ ಪಾವತಿಸಬೇಕೆಂದು ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿದ್ದು, ಅದರಂತೆ ಪಾವತಿಯಾಗುತ್ತಿದೆ. ಇನ್ನೂ ಸಮಸ್ಯೆಗಳಿವೆ ಎಂದು ಹೇಳಿದ್ದಕ್ಕೆ, ಸಚಿವರು ಆಗಸ್ಟ್ 7ರಂದು ಮತ್ತೆ ಗುತ್ತಿಗೆದಾರರ ಸಭೆ ಕರೆದಿದ್ದಾರೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ತಿಳಿಸಿದರು.
‘ಲೋಕೋಪಯೋಗಿ ಹೊರತುಪಡಿಸಿ ಇತರೆ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬಿಲ್‌ಗಳಿಗೆ ಜ್ಯೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಟೆಂಡರ್‌ನಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪಾಲನೆ ಆಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.