ADVERTISEMENT

₹37,000 ಕೋಟಿ ಬಿಲ್ ಬಾಕಿ: ರಾಜ್ಯ ಸರ್ಕಾರದ ವಿರುದ್ಧ ಬಂಡೆದ್ದ ಗುತ್ತಿಗೆದಾರರ ಸಂಘ

ರಾಜ್ಯದೆಲ್ಲೆಡೆ ಕಾಮಗಾರಿ ಸ್ಥಗಿತ; ಎಲ್ಲ ಜಿಲ್ಲೆಗಳ ಗುತ್ತಿಗೆದಾರರು ಭಾಗಿ; ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:07 IST
Last Updated 3 ಮಾರ್ಚ್ 2026, 16:07 IST
ಆರ್.ಮಂಜುನಾಥ್
ಆರ್.ಮಂಜುನಾಥ್   

ಬೆಂಗಳೂರು: ಸರ್ಕಾರದ ಹಲವು ಇಲಾಖೆಗಳಲ್ಲಿ ಬಾಕಿ ಇರುವ ₹37 ಸಾವಿರ ಕೋಟಿ ಮೊತ್ತದ ಬಿಲ್‌ ಪಾವತಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯದ ಎಲ್ಲ ಭಾಗಗಳಲ್ಲಿ ಮಾರ್ಚ್‌ 6ರಂದು ಕಾಮಗಾರಿಗಳನ್ನು ನಿಲ್ಲಿಸಿ ರಾಜ್ಯ ಗುತ್ತಿಗೆದಾರರ ಸಂಘ ಮುಷ್ಕರ ನಡೆಸಲಿದೆ.

ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂದು ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಗುತ್ತಿಗೆದಾರರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಸಚಿವರನ್ನು ಭೇಟಿ ಹಣ ಬಿಡುಗಡೆಗೆ ಎರಡು ವರ್ಷದಿಂದ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಈವರೆಗೆ ಹಣ ಬಿಡುಗಡೆಗೆ ಆಸಕ್ತಿ ತೋರಿಲ್ಲ. ಹೀಗಾಗಿ, ನಾವು ಮುಷ್ಕರ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

‘ಎರಡೂವರೆ ವರ್ಷದಲ್ಲಿ ಹಂತಹಂತವಾಗಿ ಹಣ ಬಿಡುಗಡೆ ಮಾಡಿದ್ದರೂ ಈ ವೇಳೆಗೆ ಸಾಕಷ್ಟು ಬಾಕಿ ಕಡಿಮೆಯಾಗುತ್ತಿತ್ತು. ಆದರೆ, ಮುಖ್ಯಮಂತ್ರಿಯವರು ಗುತ್ತಿಗೆದಾರರ ಸಂಘದೊಂದಿಗೆ ಅಧಿಕೃತವಾಗಿ ಸಭೆ ನಡೆಸಲಿಲ್ಲ. ಹಲವು ಬಾರಿ ಸಭೆ ನಿಗದಿಯಾದರೂ ನಡೆಯಲಿಲ್ಲ. ಬಿಲ್‌ ಬಾಕಿ ಅಷ್ಟೇ ಅಲ್ಲ, ನಮ್ಮ ಹಲವು ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಬೇಕಿತ್ತು. ಅದಕ್ಕೂ ಅವರು ಅವಕಾಶ ಕೊಡಲಿಲ್ಲ’ ಎಂದು ದೂರಿದರು.

‘ಲೋಕೋಪಯೋಗಿ ಇಲಾಖೆ ಮತ್ತು ಜಿಬಿಎ (ಹಿಂದಿನ ಬಿಬಿಎಂಪಿ) ಹೊರತುಪಡಿಸಿದರೆ ಉಳಿದ ಯಾವ ಇಲಾಖೆಯಲ್ಲೂ ಬಿಲ್‌ ಪಾವತಿಯಲ್ಲಿ ಜ್ಯೇಷ್ಠತೆ ಪಾಲಿಸುತ್ತಿಲ್ಲ. ವ್ಯಾಟ್‌ ವ್ಯತ್ಯಾಸ ಮೊತ್ತವನ್ನು ಸರ್ಕಾರವೇ ಭರಿಸಲು ತೀರ್ಮಾನವಾಗಿದ್ದರೂ ಅದರ ಆದೇಶವಾಗಿಲ್ಲ. ಹೀಗೆ ಹಲವು ಸಮಸ್ಯೆಗಳಿದ್ದರೂ ಅದನ್ನು ಆಲಿಸುವ ಸೌಜನ್ಯವೂ ಮುಖ್ಯಮಂತ್ರಿ ಹಾಗೂ ಸಚಿವರಿಗಿಲ್ಲ’  ಎಂದು ದೂರಿದರು.

---

ಮುಖ್ಯಮಂತ್ರಿ ಸಚಿವರ ನಿರ್ಲಕ್ಷ್ಯದಿಂದ ಮುಷ್ಕರ ಹಾದಿ ಹಿಡಿದಿದ್ದೇವೆ. ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ

-ಆರ್‌. ಮಂಜುನಾಥ್‌ ಅಧ್ಯಕ್ಷ ರಾಜ್ಯ ಗುತ್ತಿಗೆದಾರರ ಸಂಘ

--

ಗುತ್ತಿಗೆದಾರರ ಬೇಡಿಕೆಗಳೇನು?

* ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಕೂಡಲೇ ಬಿಡುಗಡೆ ಮಾಡಬೇಕು * ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಅನುವಾಗುವಂತೆ ‘ಸಿಂಗಲ್‌ ಕಾಮಗಾರಿ’ ಟೆಂಡರ್‌ ಕರೆಯಬೇಕು * ನಗರಾಭಿವೃದ್ಧಿ ಇಲಾಖೆಯ 10 ನಗರ ಪಾಲಿಕೆಗಳಲ್ಲಿ ದೊಡ್ಡಮೊತ್ತದ ಪ್ಯಾಕೇಜ್‌ ಟೆಂಡರ್‌ ಕೈಬಿಡಬೇಕು * ಜಲಜೀವನ್‌ ಮಿಷನ್‌ನಡಿಯ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌/ ನಿರ್ಮಿತಿ ಕೇಂದ್ರಕ್ಕೆ ಮಾತ್ರ ನೀಡಬಾರದು * ಗುತ್ತಿಗೆದಾರರ ಸಂಕಷ್ಟಗಳನ್ನು ಆಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಸಭೆ ಕರೆಯಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.