ADVERTISEMENT

ಪಡಿತರ ಎತ್ತುವಳಿ: ‘ಅನಾಮಿಕ’ರ ಹಾವಳಿ

ವಿ.ಎಸ್.ಸುಬ್ರಹ್ಮಣ್ಯ
Published 1 ನವೆಂಬರ್ 2022, 2:40 IST
Last Updated 1 ನವೆಂಬರ್ 2022, 2:40 IST
   

ಬೆಂಗಳೂರು: ರಾಜಧಾನಿ ವ್ಯಾಪ್ತಿಯಲ್ಲಿ ಪಡಿತರ ಧಾನ್ಯಗಳ ಎತ್ತುವಳಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಬದಲಿಗೆ ‘ಅನಾಮಿಕ’ ವ್ಯಕ್ತಿಗಳು ಭಾಗಿಯಾಗುತ್ತಿರುವ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ವ್ಯಾಪಕ ದೂರುಗಳು ಬರಲಾರಂಭಿಸಿವೆ.

ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಥವಾ ಅವರ ಅಧಿಕೃತ ಪ್ರತಿನಿಧಿಗಳಲ್ಲದವರು ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡಲು ಬರುತ್ತಿರುವ ಕುರಿತು ಗೋಪ್ಯವಾಗಿ ಮಾಹಿತಿ ಸಂಗ್ರಹಿಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ‘ಅಕ್ರಮ ಎತ್ತುವಳಿ’ ತಡೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದ ಅನೌಪ ಚಾರಿಕ ಪಡಿತರ ಪ್ರದೇಶ (ಐಆರ್‌ಎ) ವಲಯದ ವ್ಯಾಪ್ತಿಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗ ಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಪಡಿತರ ವಿತರಣಾ ವಲಯ ಗಳಿವೆ. ನಾಲ್ಕೂ ವಲಯಗಳಲ್ಲಿರುವ ಒಟ್ಟು 742 ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳಿಗೆ ಸುಮಾರು 3.50 ಲಕ್ಷ ಕ್ವಿಂಟಲ್‌ಗೂ ಹೆಚ್ಚು ಪಡಿತರ ಧಾನ್ಯಗಳ ವಿತರಣೆಯಾಗುತ್ತಿದೆ. ಪಡಿತರ ಚೀಟಿ ದಾರರಿಗೆ ಹಂಚಿಕೆಯಾಗುವ ಅಕ್ಕಿ, ರಾಗಿ ಎತ್ತುವಳಿಯಲ್ಲಿ ಕೆಲವೆಡೆ ‘ಅನಾಮಿಕ’ ವ್ಯಕ್ತಿಗಳು ಹಸ್ತಕ್ಷೇಪ ಮಾಡುತ್ತಿರುವುದನ್ನು ಇಲಾಖೆ ಗುರುತಿಸಿದೆ.

ADVERTISEMENT

ಭಾರತೀಯ ಉಗ್ರಾಣ ನಿಗಮದ (ಎಫ್‌ಸಿಐ) ಸಗಟು ಪಡಿತರ ದಾಸ್ತಾನು ಉಗ್ರಾಣಗಳಿಂದ ತರುವ ಆಹಾರ ಧಾನ್ಯಗಳನ್ನು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ (ಕೆಎಸ್‌ಸಿಎಫ್‌ಸಿ) ಚಿಲ್ಲರೆ ಪಡಿತರ ಧಾನ್ಯ ವಿತರಣಾ ಗೋದಾಮುಗಳು ಹಾಗೂ ವಿವಿಧ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸೊಸೈಟಿಯ (ಟಿಎಪಿಸಿಎಂಎಸ್‌) ಗೋದಾಮುಗಳಲ್ಲಿ ಶೇಖರಿಸಿಡಲಾಗುತ್ತಿದೆ. ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಾಗಣೆ ಮಾಡಲಾಗುತ್ತದೆ.

ನಿಯಮ ಉ್ಲಲಂಘನೆ: ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರ, ನಿಗದಿತ ದಿನಾಂಕದಂದು ನ್ಯಾಯಬೆಲೆ ಅಂಗಡಿಯ ಮಾಲೀಕರು ಅಥವಾ ಅಧಿಕೃತ ಪ್ರತಿನಿಧಿಗಳು ಕೆಎಸ್‌ಸಿಎಫ್‌ಸಿ ಅಥವಾ ಟಿಎಪಿಸಿಎಂಎಸ್‌ ಉಗ್ರಾಣ ಗಳಿಗೆ ಹಾಜರಾಗಿ ತಮ್ಮ ಅಂಗಡಿಗೆ ಹಂಚಿಕೆಯಾದ ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡಬೇಕು. ಆಯಾ ಪ್ರದೇಶದ ಉಸ್ತುವಾರಿ ಹೊಂದಿರುವ ಆಹಾರ ನಿರೀಕ್ಷಕರು ಅಲ್ಲಿ ಹಾಜರಿದ್ದು, ಪಡಿತರ ಧಾನ್ಯಗಳ ಎತ್ತುವಳಿಯನ್ನು ದೃಢೀಕರಿಸಬೇಕು.

‘ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಮ್ಮ ಬದಲಿಗೆ ಅನಧಿಕೃತ ವ್ಯಕ್ತಿಗಳನ್ನು ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡಲು ಕಳುಹಿಸುತ್ತಿರುವ ದೂರುಗಳಿವೆ. ದೂರುಗಳ ಕುರಿತು ಪರಿಶೀಲನೆ ನಡೆಸಿದ್ದು, ಲೋಪಗಳನ್ನು ತಡೆಯಲು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಪಡಿತರ ಧಾನ್ಯಗಳ ಎತ್ತುವಳಿಯಲ್ಲಿ ಅನಧಿಕೃತ ವ್ಯಕ್ತಿಗಳು ಭಾಗಿಯಾಗಿರುವುದು ಪತ್ತೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬೆಂಗಳೂರು–ಐಆರ್‌ಎ ವಲಯದ ಹೆಚ್ಚುವರಿ ನಿರ್ದೇಶಕ ವಿ. ಪಾತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ವೇಳಾಪಟ್ಟಿಯಂತೆ ಎತ್ತುವಳಿಗೆ ಸೂಚನೆ

ಕೆಎಸ್‌ಸಿಎಫ್‌ಸಿ ಮತ್ತು ಟಿಎಪಿಸಿಎಂಎಸ್‌ ಚಿಲ್ಲರೆ ಪಡಿತರ ವಿತರಣಾ ಗೋದಾಮುಗಳ ವ್ಯವಸ್ಥಾಪಕರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಎತ್ತುವಳಿಗೆ ವೇಳಾಪಟ್ಟಿ ನಿಗದಿ ಮಾಡಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಥವಾ ಅವರ ಅಧಿಕೃತ ಪ್ರತಿನಿಧಿ ಮತ್ತು ಅಲ್ಲಿನ ಉಸ್ತುವಾರಿ ಆಹಾರ ನಿರೀಕ್ಷಕರು ಹಾಜರಾಗಬೇಕು. ಗೋದಾಮುಗಳ ವ್ಯವಸ್ಥಾಪಕರು ಎಲ್ಲವನ್ನೂ ಖಾತರಿಪಡಿಸಿಕೊಂಡು ಅಧಿಕೃತ ವಾಹನಗಳಲ್ಲೇ ಪಡಿತರ ಧಾನ್ಯಗಳ ಸಾಗಣೆಗೆ ಅವಕಾಶ ಕಲ್ಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬೆಂಗಳೂರು–ಐಆರ್‌ಎ ವಲಯದ ಹೆಚ್ಚುವರಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.