ADVERTISEMENT

ಭ್ರಷ್ಟಾಚಾರ: ಆಡಳಿತ ಪಕ್ಷ-ವಿರೋಧ ಪಕ್ಷದ ನಾಯಕರ ನಡುವೆ ಮುಂದುವರಿದ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
<div class="paragraphs"><p>ಕಾಂಗ್ರೆಸ್, ಬಿಜೆಪಿ ‌‌</p></div>

ಕಾಂಗ್ರೆಸ್, ಬಿಜೆಪಿ ‌‌

   

ಬೆಂಗಳೂರು: ಕರ್ನಾಟಕದ ಭ್ರಷ್ಟಾಚಾರದ ಕುರಿತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನೀಡಿದ್ದ ಹೇಳಿಕೆ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ಜಟಾಪಟಿ ಶುಕ್ರವಾರವೂ ಮುಂದುವರೆದಿದೆ.

‘ಇದು ಕಾಂಗ್ರೆಸ್‌ ಅವಧಿಯ ವರದಿ’ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ‘ಇದು ಬಿಜೆಪಿ ಅವಧಿಯ ವರದಿ’ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ. ಆದರೆ 2019ರ ನವೆಂಬರ್‌ನಲ್ಲಿ ಬಿಡುಗಡೆಯಾದ ವರದಿಯು, ಅಲ್ಲಿಂದ 12 ತಿಂಗಳ ಹಿಂದಿನ ಅವಧಿಗೆ ಸಂಬಂಧಿಸಿದ್ದು. ಆ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿತ್ತು.

ADVERTISEMENT
‘ಅಶೋಕ ಮತಿಗೇಡಿತನ’

‘ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್‌ನ್ಯಾಶನಲ್ ಸಂಸ್ಥೆಯು 2019ರ ನವೆಂಬರ್‌ನಲ್ಲಿ ನೀಡಿರುವ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂದಿತ್ತು. ಈ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು. ಆರ್.ಅಶೋಕ್ ಅವರು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಮಾತುಗಳನ್ನು ನಮ್ಮ ಸರ್ಕಾರಕ್ಕೆ ಅನ್ವಯಿಸಿ ಹೇಳುವ ಆರ್.ಅಶೋಕ್ ಅವರ ಮತಿಗೇಡಿತನಕ್ಕೆ ಏನೆನ್ನಬೇಕು? ನಮ್ಮ ಸರ್ಕಾರದಲ್ಲಿ ನೇಮಕಾತಿಯಿಂದ ಹಿಡಿದು ವರ್ಗಾವಣೆಯವರೆಗೆ ಎಲ್ಲವನ್ನೂ ಪಾರದರ್ಶಕವಾಗಿಸುವ ಯಾವುದೇ ರೀತಿಯ ಹಣ ಅಧಿಕಾರದ ದುರ್ಬಳಕೆಯಾಗುವುದನ್ನು ತಡೆಯುವ ಪ್ರಯತ್ನ ಜಾರಿಯಲ್ಲಿದೆ. ಬಿಜೆಪಿ ಸರ್ಕಾರದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎರಡೂವರೆ ವರ್ಷದಲ್ಲಿ ಸ್ವಚ್ಚ ಮಾಡುವುದು ಅಸಾಧ್ಯ. ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಸರಿಪಡಿಸುತ್ತೇವೆ’ ಎಂದಿದ್ದಾರೆ.

‘ಕಾಂಗ್ರೆಸ್ ಅವಧಿಯ ವರದಿ’

‘ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಉಲ್ಲೇಖಿಸಿರುವ ‘ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್‌’ ವರದಿ 2019ರಲ್ಲಿ ಬಿಡುಗಡೆಯಾಗಿದ್ದು ವರದಿಯ ದತ್ತಾಂಶವು 2018ರ ಅವಧಿಯದ್ದು. ಹಾಗಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವಧಿಯಲ್ಲೇ ಶೇ 63ರಷ್ಟು ಭ್ರಷ್ಟಾಚಾರ ಇತ್ತು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು ‘ವರದಿಯು 2019ಕ್ಕೂ ಹಿಂದಿನ ವರ್ಷದ ಭ್ರಷ್ಟಾಚಾರದ ಕುರಿತು ನಡೆಸಿದ ಸಮೀಕ್ಷೆಯ ಅಂಶಗಳನ್ನು ಒಳಗೊಂಡಿತ್ತು. ನ್ಯಾ.ವೀರಪ್ಪ ಅವರು ಆಗಿನ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಆಡಳಿತದ ಬಗ್ಗೆ ಹೇಳಿಲ್ಲ’ ಎಂದರು.

‘ಇದೊಂದೇ ವರದಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದಿಲ್ಲ. 2017ರ ಮತ್ತೊಂದು ರಾಷ್ಟ್ರೀಯ ಸಮೀಕ್ಷೆಯೂ ಕರ್ನಾಟಕವನ್ನು ಭಾರತದ ಅತ್ಯಂತ ಭ್ರಷ್ಟ ರಾಜ್ಯ ಎಂದು ಘೋಷಿಸಿತ್ತು. ಈ ವರದಿಗಳ ಅರಿವಿಲ್ಲದೆ ಲೋಕಾಯುಕ್ತ ವರದಿ ಎಂದು ತಪ್ಪು ಮಾಹಿತಿ ನೀಡಿ ನಂತರ ತಿದ್ದಿಕೊಂಡಿದ್ದಾರೆ’ ಎಂದು ದೂರಿದರು.

‘ಶೇ 40 ಅಲ್ಲ ಶೇ 63’

‘ಈ ವರದಿ ಬಂದಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿತ್ತು. 2023ರಲ್ಲಿ ನಾವು ‘ಬಿಜೆಪಿಯದ್ದು ಶೇ 40ರಷ್ಟು ಕಮಿಷನ್‌ ಸರ್ಕಾರ’ ಎಂದಿದ್ದೆವು. ಈಗ ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ಶೇ 63ರಷ್ಟು ಭ್ರಷ್ಟಾಚಾರವಿತ್ತು ಎಂದಿರುವ ವರದಿಯನ್ನು ತಾವೇ ಸಾರ್ವಜನಿಕಗೊಳಿಸಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಬಿಜೆಪಿ ನಾಯಕರು ಕರ್ನಾಟಕದತ್ತ ಬೊಟ್ಟು ಮಾಡುವುದನ್ನು ಬಿಡಬೇಕು. ಬದಲಿಗೆ ಬಿಜೆಪಿ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತವು 96ನೇ ಸ್ಥಾನಕ್ಕೆ ಕುಸಿದಿರುವುದು ಏಕೆ ಎಂಬುದನ್ನು ವಿವರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.