ADVERTISEMENT

ಹೇಳಿಕೆ ದುರುಪಯೋಗ ಸಲ್ಲ: ನ್ಯಾ.ವೀರಪ್ಪ ಗುಡುಗು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 14:29 IST
Last Updated 5 ಡಿಸೆಂಬರ್ 2025, 14:29 IST
ನ್ಯಾ.ಬಿ.ವೀರಪ್ಪ
ನ್ಯಾ.ಬಿ.ವೀರಪ್ಪ   

ಬೆಂಗಳೂರು: ‘ಭ್ರಷ್ಟಾಚಾರದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿ ಇದೆ ಎಂಬುದು ಇಂಡಿಯಾ ಕರಪ್ಶನ್‌ ಸರ್ವೇ–2019ರ ಸರ್ವೇಕ್ಷಣಾ ವರದಿಯ ಅಂಕಿ ಅಂಶ ಆಧರಿಸಿದ ನನ್ನ ಹೇಳಿಕೆಯನ್ನು ರಾಜಕಾರಣಿಗಳು ದುರುಪಯೋಗ ಮಾಡಿಕೊಂಡರೆ ಸಹಿಸುವುದಿಲ್ಲ’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಗುಡುಗಿದರು.

‘ಹೈಕೋರ್ಟ್‌ ವಕೀಲ ತುಳವನೂರು ಶಂಕರಪ್ಪ ಅವರು ಬರೆದಿರುವ ‘ಓವರ್‌ಸೀಸ್‌ ಟ್ರಾವೆಲಾಗ್‌’ ಪ್ರವಾಸ ಕಥನ ಬಿಡುಗಡೆ ಕಾರ್ಯಕ್ರಮದಲ್ಲಿನ ನನ್ನ ಉಕ್ತ ಅಂಶಗಳು ವರದಿಯಲ್ಲಿ ಪೂರ್ಣಪ್ರಮಾಣದಲ್ಲಿ ವ್ಯಕ್ತವಾಗಿಲ್ಲ. ವಾಸ್ತವದಲ್ಲಿ ನಾನು ಯಾವುದೇ ಸರ್ಕಾರ ಎಂದು ನಿರ್ದಿಷ್ಟವಾಗಿ ಬೊಟ್ಟು ಮಾಡಿಲ್ಲ. ಅಂಕಿ ಅಂಶಗಳನ್ನು ಆಧರಿಸಿ, ಕೇರಳದಲ್ಲಿ ಅತಿ ಕಡಿಮೆ ಭ್ರಷ್ಟಾಚಾರ ಇದೆ ಮತ್ತು ಕರ್ನಾಟಕ 5ನೇ ಸ್ಥಾನದಲ್ಲಿದೆ ಎಂಬ 2019ರ ಸರ್ವೇ ವರದಿಯನ್ನು ಉಲ್ಲೇಖಿಸಿದ್ದೇನೆ’ ಅವರು ವಿವರಿಸಿದರು.

ತಮ್ಮ ಕಚೇರಿಯಲ್ಲಿ ಶುಕ್ರವಾರ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿಶದಪಡಿಸಿದ ಅವರು, ‘ಯಾವುದೇ ಪಕ್ಷಕ್ಕೂ ನನಗೂ ಸಂಬಂಧವಿಲ್ಲ. ನಾನು ಅತ್ಯಂತ ಪ್ರಾಮಾಣಿಕವಾಗಿ ನನ್ನ ಕರ್ತವ್ಯಗಳನ್ನು ಸರ್ಕಾರಿ ವಕೀಲನಾಗಿ, ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಮತ್ತು ಈಗ ಉಪ ಲೋಕಾಯುಕ್ತನಾಗಿ ಅತ್ಯಂತ ಪಾರದರ್ಶಕ ನಿಭಾಯಿಸುತ್ತಾ ಬಂದಿದ್ದೇನೆ’ ಎಂದರು.

ADVERTISEMENT

‘ಇಂದು ನಮ್ಮ ವ್ಯವಸ್ಥೆಯ ನಾಲ್ಕೂ ಅಂಗಗಳು ಬಲಹೀನವಾಗಿವೆ. ಅದರಲ್ಲಿ ನ್ಯಾಯಾಂಗ ಮತ್ತು ಪತ್ರಿಕಾ ರಂಗ ಒಳ್ಳೆ ಕೆಲಸ ಮಾಡುತ್ತಿವೆ. ಕಾರ್ಯಕ್ರಮದಲ್ಲಿ ಮಾತನಾಡುವಾಗ ನಾನು, ಸರ್ವೇ ವರದಿಯಲ್ಲಿದ್ದ ಅಂಶಗಳನ್ನು ಪ್ರಸ್ತಾಪಿಸಿದ್ದೇನೆಯಷ್ಟೇ ಹೊರತು, ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮಗೆ ಸ್ವಾತಂತ್ರ್ಯ ಬಂದು 78 ವರ್ಷಗಳು ಹೇಗೆ ಆಗಿವೆಯೋ ಹಾಗೆಯೇ ದೇಶದಲ್ಲಿನ ಭ್ರಷ್ಟಾಚಾರಕ್ಕೂ ಅಷ್ಟೇ ವಯಸ್ಸಾಗಿದೆ. ಭ್ರಷ್ಟಾಚಾರ ಇಂದು ಕ್ಯಾನ್ಸರ್ ರೀತಿ ಹಬ್ಬಿದೆ. ಈ ಪಿಡುಗಿಗೆ ನಾವೆಲ್ಲರೂ ಕಾರಣ. ದುಡ್ಡು ತೆಗೆದುಕೊಂಡು ಮತ ಹಾಕುವ ಮತದಾರರನ್ನು ನಾವು ಪೋಷಿಸಿದ್ದೇವೆ. ಯಾವ ಸರ್ಕಾರವೂ ಭ್ರಷ್ಟಾಚಾರ ನಿರ್ಮೂಲನೆ ಮಾಡಲಿಲ್ಲ’ ಎಂದು ವಿಷಾದಿಸಿದರು.

ಹಿನ್ನೆಲೆ: ಇದೇ 3ರಂದು ಮಧ್ಯಾಹ್ನ ತುಳವನೂರು ಶಂಕರಪ್ಪ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾ.ವೀರಪ್ಪ ಅವರು, ‘ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ಕರ್ನಾಟಕ ಭ್ರಷ್ಟಾಚಾರದ ಅಗ್ರಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿದೆ. ಈ ಪಿಡುಗನ್ನು ಕೂಡಲೇ ತಡೆಯದೇ ಹೋದರೆ ಭವಿಷ್ಯದಲ್ಲಿ ಭೀಕರ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದ್ದರು.

ಲೋಕಾಯುಕ್ತನಾಗಿ ನನಗೆ ನನ್ನ ಜವಾಬ್ದಾರಿಯ ಅರಿವಿದೆ. ನಾನು ಭ್ರಷ್ಟಾಚಾರದ ವಿರುದ್ಧ ಯಾವತ್ತೂ ಸ್ಪಂದನಶೀಲ ಮನೋಭಾವ ಹೊಂದಿರುವ ವ್ಯಕ್ತಿ
ನ್ಯಾ. ಬಿ. ವೀರಪ್ಪ, ಉಪ ಲೋಕಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.