ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂಕಿ-ಅಂಶ ಸ್ಪಷ್ಟವಾಗಿದೆ. ಅಂಕಿ-ಅಂಶಗಳಿಗೆ ಸಂಬಂಧಿಸಿದ ಯಾವುದೇ ಊಹಾಪೋಹಗಳು, ಅಪಪ್ರಚಾರಗಳಿಗೆ ಜನ ಕಿವಿಗೊಡುವುದು ಬೇಡ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಶುಕ್ರವಾರ ಹೇಳಿದ್ದಾರೆ.
ಕೋವಿಡ್ ಸೋಂಕು ಮತ್ತು ಅದಕ್ಕೆ ಸಂಬಂಧಿಸಿದ ಪರಿಣಾಮಗಳಿಂದ 2020 ಮತ್ತು 2021ರಲ್ಲಿ ವಿಶ್ವದಾದ್ಯಂತ ಸುಮಾರು 1.5 ಕೋಟಿ ಜನರು ಮೃತಪಟ್ಟಿರುವುದಾಗಿಯೂ, ಇದೇ ಅವಧಿಯಲ್ಲಿ ಭಾರತದಲ್ಲಿ 47 ಲಕ್ಷ ಜನ ಸಾವಿಗೀಡಾಗಿರುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಗುರುವಾರ ಅಂದಾಜು ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಈ ಅಂದಾಜನ್ನು ಭಾರತ ಗುರುವಾರವೇ ಆಕ್ಷೇಪಿಸಿದೆ. ಇದೇ ಹಿನ್ನೆಲೆಯಲ್ಲೇ ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಸಚಿವ ಸುಧಾಕರ್, ‘ಕೊರೊನಾ ಅಂಕಿ-ಅಂಶ ದಾಖಲಿಸಲು ರಾಜ್ಯದಲ್ಲಿ ಪಾರದರ್ಶಕ ವ್ಯವಸ್ಥೆ ಪಾಲಿಸಲಾಗಿದ್ದು ಈವರೆಗೂ 40,060 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಅಧಿಕೃತ ದಾಖಲೆ ಇದೆ. ಊಹಾಪೋಹಗಳು, ಅಪಪ್ರಚಾರಗಳಿಗೆ ಜನ ಕಿವಿಗೊಡಬಾರದು’ ಎಂದು ಹೇಳಿದ್ದಾರೆ.
‘ಸಾವಿನ ಪ್ರಮಾಣವನ್ನು ಅಂದಾಜಿಸಲು ಡಬ್ಲ್ಯೂಎಚ್ಒ ಅನುಸರಿಸಿರುವ ಮಾದರಿ ಹಾಗೂ ಅಂಕಿ– ಅಂಶಗಳ ಸಂಗ್ರಹ ಕ್ರಮವು ಪ್ರಶ್ನಾರ್ಹವಾಗಿದೆ’ ಎಂದು ಭಾರತ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.