ADVERTISEMENT

ಜನಸಂದಣಿ ನಿಯಂತ್ರಣ ಮಸೂದೆ ಸದನ ಸಮಿತಿಗೆ: ವಿರೋಧ ಪಕ್ಷಗಳ ಪಟ್ಟಿಗೆ ಮಣಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 14:51 IST
Last Updated 21 ಆಗಸ್ಟ್ 2025, 14:51 IST
   

ಬೆಂಗಳೂರು: ಕಾರ್ಯಕ್ರಮ ಮತ್ತು ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸುವ ಜೊತೆಗೆ, ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ತಡೆಯುವ ಉದ್ದೇಶದ ‘ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ಮಸೂದೆಯನ್ನು ವಿಧಾನಸಭೆಯ ಸದನ ಸಮಿತಿಗೆ ವಹಿಸಬೇಕೆಂಬ ವಿರೋಧ ಪಕ್ಷಗಳ ಸದಸ್ಯರ ಪಟ್ಟಿಗೆ ಸರ್ಕಾರ ಮಣಿಯಿತು. 

ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಸದಸ್ಯರು, ‘ಇದೊಂದು ಗಂಭೀರವಾದ ಮಸೂದೆ. ಹೆಚ್ಚಿನ ಚರ್ಚೆಯ ಅಗತ್ಯವಿದೆ’ ಎಂದು ಆಗ್ರಹಿಸಿದರು. ಗೃಹ ಸಚಿವ ಜಿ. ಪರಮೇಶ್ವರ ಅವರು ಆಕ್ಷೇಪಗಳಿಗೆ ವಿವರಣೆ ನೀಡಿದರೂ ವಿರೋಧ ಪಕ್ಷಗಳ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಹೀಗಾಗಿ, ಸದನ ಸಮಿತಿಗೆ ವಹಿಸುವುದಾಗಿ ಅವರು ಪ್ರಕಟಿಸಿದರು.

ಮಸೂದೆ ಮಂಡಿಸಿದ ಪರಮೇಶ್ವರ, ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತವೂ ಸೇರಿದಂತೆ ಹಲವೆಡೆ ಸಂಭವಿಸಿದ ಕಾಲ್ತುಳಿತ ದುರ್ಘಟನೆಯನ್ನು ಗಮನದಲ್ಲಿ ಇಟ್ಟುಕೊಂಡು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳ ರಕ್ಷಣೆ ಹಾಗೂ ಆಯೋಜಕರನ್ನು ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಈ ಮಸೂದೆ ತರಲಾಗಿದೆ’ ಎಂದರು.

ADVERTISEMENT

‘ಮಸೂದೆಯ ಪ್ರಕಾರ, ಆಯೋಜಕರು ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಏಳು ಸಾವಿರ ಜನರಗಿಂತ ಕಡಿಮೆ ಇದ್ದರೆ ಆ ವ್ಯಾಪ್ತಿಯ ಪೊಲೀಸ್‌‍ ಠಾಣೆಯ ಉಸ್ತುವಾರಿ ಅಧಿಕಾರಿ, ಏಳು ಸಾವಿರಕ್ಕಿಂತ ಹೆಚ್ಚಿದ್ದರೆ ಡಿವೈಎಸ್ಪಿ, ಬೆಂಗಳೂರಿನಲ್ಲಿ ಎಸಿಪಿ, 50 ಸಾವಿರಕ್ಕಿಂತ ಹೆಚ್ಚಿದ್ದರೆ ಎಸ್‌‍ಪಿ ಅಥವಾ ಕಮಿಷನರ್ ಅನುಮತಿ ಕೊಡಬೇಕಾಗುತ್ತದೆ. ಆಯೋಜಕರು ಕಾರ್ಯಕ್ರಮಕ್ಕೆ 10 ದಿನ ಮೊದಲು ಸಿದ್ದತೆ, ನಡೆಯುವ ಜಾಗ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಬೇಕು. ಖಾಸಗಿ ಹಾಗೂ ಸಾರ್ವಜನಿಕ ಸ್ವತ್ತಿಗೆ ಹಾನಿಯಾಗದ ರೀತಿ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊರಬೇಕು’ ಎಂದು ವಿವರಿಸಿದರು.

ಪ್ರಾಧಿಕಾರದ ಅನುಮತಿ ನೀಡುವ ಮೊದಲು ಅಗ್ನಿಶಾಮಕ, ಲೋಕೋಪಯೋಗಿ ಮತ್ತು ಆರೋಗ್ಯ ಇಲಾಖೆಯ ಅನುಮತಿಯನ್ನು ಆಯೋಜಕರು ಪಡೆದಿರಬೇಕು. ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿ ಅರ್ಜಿದಾರರಿಗೆ ಈ ಎಲ್ಲ ನಿರ್ದೇಶನಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದರು.

‘ಈ ಮಸೂದೆಯಲ್ಲಿರುವ ಅಂಶಗಳು ಗೊಂದಲ ಉಂಟು ಮಾಡುವಂತಿದೆ. ಜಾತ್ರೆ, ಹಬ್ಬಗಳ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಆಕ್ಷೇಪಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಬಿಜೆಪಿಯ ಎಸ್‌. ಸುರೇಶ್‌ಕುಮಾರ್, ವಿ. ಸುನಿಲ್‌ಕುಮಾರ್‌, ಸುರೇಶ್ ಗೌಡ, ಉಮಾನಾಥ ಕೋಟ್ಯಾನ್‌, ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಜೆಡಿಎಸ್‌ನ ಶರಣಗೌಡ ಕಂದಕೂರ ಮುಂತಾದವರು ಸದನ ಸಮಿತಿ ರಚಿಸುವಂತೆ ಪಟ್ಟು ಹಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.