ADVERTISEMENT

ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 14:21 IST
Last Updated 22 ನವೆಂಬರ್ 2025, 14:21 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರನ್ನು ಬಿ.ವೈ. ವಿಜಯೇಂದ್ರ ಶನಿವಾರ ಭೇಟಿ ಮಾಡಿ ಸಮಾಲೋಚಿಸಿದರು. 
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರನ್ನು ಬಿ.ವೈ. ವಿಜಯೇಂದ್ರ ಶನಿವಾರ ಭೇಟಿ ಮಾಡಿ ಸಮಾಲೋಚಿಸಿದರು.    

ನವದೆಹಲಿ: ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿರುವುದೇ ದೊಡ್ಡ ಸಾಧನೆ. ಹೆಚ್ಚಿನ ಇಲಾಖೆಗಳು 2024–25ನೇ ಸಾಲಿನಲ್ಲಿ ಶೇ 50ರಷ್ಟು ಅನುದಾನ ಖರ್ಚು ಮಾಡಿಲ್ಲ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು. 

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರದಲ್ಲಿ ಮೂರು ದಿನ ಸಿದ್ದರಾಮಯ್ಯ ಹಾಗೂ ನಾಲ್ಕು ದಿನ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಇರುತ್ತಾರೆ. ಇವರಿಬ್ಬರ ಒಳಜಗಳದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ‘ ಎಂದು ದೂರಿದರು. 

‘ಬಿಜೆಪಿ ಸರ್ಕಾರವು 2021–22ನೇ ಸಾಲಿನಲ್ಲಿ ಕೃಷಿ ಇಲಾಖೆಗೆ 6,409 ಕೋಟಿ ಅನುದಾನ ನೀಡಿ ₹6,491 ಕೋಟಿ ಖರ್ಚು ಮಾಡಿತ್ತು. ಕಾಂಗ್ರೆಸ್ ಸರ್ಕಾರ 2024–25ನೇ ಸಾಲಿನಲ್ಲಿ ₹5,035 ಕೋಟಿ ಮೀಸಲಿಟ್ಟು ಈ ವರೆಗೆ ₹2,231 ಕೋಟಿ ಮಾತ್ರ ಖರ್ಚು ಮಾಡಿದೆ‘ ಎಂದು ಅವರು ಆರೋಪಿಸಿದರು. 

ADVERTISEMENT

‘ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಈ ಇಲಾಖೆಯಲ್ಲಿ ಶೇ 50ರಷ್ಟು ಅನುದಾನ ಕಡಿತವಾಗಿದೆ. ಪ್ರಾಥಮಿಕ ಶಿಕ್ಷಣ ಇಲಾಖೆಗೆ ಈ ವರ್ಷ ₹34,391 ಕೋಟಿ ಮೀಸಲಿಟ್ಟು ₹22,910 ಕೋಟಿಯನ್ನಷ್ಟೇ ಖರ್ಚು ಮಾಡಲಾಗಿದೆ. ಎಲ್ಲ ಇಲಾಖೆಗಳಲ್ಲೂ ಶೇ 40–50ರಷ್ಟು ಅನುದಾನ ಕಡಿಮೆ ಮಾಡಿದ್ದಾರೆ. ಇದುವೇ ಕಾಂಗ್ರೆಸ್‌ ಸರ್ಕಾರದ ಎರಡೂವರೆ ವರ್ಷಗಳ ಸಾಧನೆ‘ ಎಂದು ವ್ಯಂಗ್ಯವಾಡಿದರು. 

‘ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಬಹಳ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅದರ ಶೇ 10ರಷ್ಟು ಯೋಜನೆ ಮಾಡಿದ್ದರೆ ತುಂಗಭದ್ರಾ ನದಿಯಿಂದ ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಬಹುದಿತ್ತು. ದೆಹಲಿಗೆ ಬರುವ ಬದಲು ಕೊಪ್ಪಳ ಅಥವಾ ಹೊಸಪೇಟೆಗೆ ಹೋಗಿದ್ದರೆ ರೈತರಿಗೆ ಅನ್ಯಾಯವಾಗುವುದು ತಪ್ಪುತ್ತಿತ್ತು‘ ಎಂದರು. 

‘ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಒಂದು ಗಿಮಿಕ್ ಅಷ್ಟೇ. ಗೃಹಲಕ್ಷ್ಮಿ ಅಲ್ಲ, ಚುನಾವಣಾ ಲಕ್ಷ್ಮಿಯಾಗಿದೆ. ಇದು ಮತದಾರರ ದಿಕ್ಕು ತಪ್ಪಿಸುವ ಯೋಜನೆ. ಗ್ಯಾರಂಟಿಗಳ ಮೇಲೆ ಸರ್ಕಾರಕ್ಕೆ ಭರವಸೆ ಇದ್ದರೆ ಕೂಡಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಘೋಷಿಸಲಿ‘ ಎಂದು ಅವರು ಸವಾಲು ಎಸೆದರು. 

ಯತ್ನಾಳಗೆ ಎಚ್ಚರಿಕೆ: ‘ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗಳನ್ನು ಗಮನಿಸಿದ್ದೇನೆ. ನನ್ನ ಬಗ್ಗೆ ಏನೂ ಬೇಕಾದರೂ ಟೀಕೆ ಮಾಡಲಿ. ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ‍್ಪ ವಿರುದ್ಧ ಏಕವಚನದಲ್ಲಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಯಡಿಯೂರಪ್ಪ ಬಗ್ಗೆ ಮಾತನಾಡಲು ಇವರು ಯಾರು‘ ಎಂದು ಅವರು ಪ್ರಶ್ನಿಸಿದರು. 

‘ಯತ್ನಾಳ ಹೊಸ ಪಕ್ಷ ಕಟ್ಟುವುದಾದರೆ ಕಟ್ಟಲಿ, ಅವರು ಹೊಸ ಪಕ್ಷಕ್ಕಾಗಿ ಚಿಹ್ನೆ ಹುಡುಕಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ. 500 ಜನರು ಸೇರಿ ಗಣಪತಿ ಮೆರವಣಿಗೆ ಮಾಡಿದರೆ ಅಲ್ಲಿಗೆ ಯತ್ನಾಳ ಬರುತ್ತಾರೆ. ಊರಿಗೆಲ್ಲ ಬುದ್ದಿ ಹೇಳುವ ಯತ್ನಾಳ ಅವರು ವಾಜಪೇಯಿ ಸರ್ಕಾರ ವಿಶ್ವಾಸಮತ ಯಾಚಿಸಿದ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ‘ ಎಂದರು. 

ಡಿಕೆಶಿ ಬಿಜೆಪಿ ಸಂಪರ್ಕದಲ್ಲಿಲ್ಲ: ವಿಜಯೇಂದ್ರ

ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದ ವಿಜಯೇಂದ್ರ ಕಾಂಗ್ರೆಸ್‌ನ ಆಂತರಿಕ ವಿಚಾರಗಳಲ್ಲಿ ನಮಗೆ ಆಸಕ್ತಿ ಇಲ್ಲ ಎಂದರು.  ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂದು ಕೆಲವು ಕಾಂಗ್ರೆಸ್‌ ನಾಯಕರೇ ಸುದ್ದಿ ಹರಡುತ್ತಿದ್ದಾರೆ. ಇದರಲ್ಲಿ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.