ADVERTISEMENT

ವಿದೇಶದಲ್ಲಿ ಕನ್ನಡ ಕಲರವ:ಜರ್ಮನಿಯ ನಮ್ಮ ಕನ್ನಡ ಶಾಲೆ ಜೊತೆ ಶಿಕ್ಷಣ ಇಲಾಖೆ ಒಪ್ಪಂದ

ಕೃಷ್ಣಿ ಶಿರೂರ
Published 3 ಮಾರ್ಚ್ 2025, 0:56 IST
Last Updated 3 ಮಾರ್ಚ್ 2025, 0:56 IST
ಜರ್ಮನಿಯ ನಮ್ಮ ಕನ್ನಡ ಶಾಲೆಯ ಮಕ್ಕಳು ಹಾಗೂ ಬೋಧಕ ವರ್ಗ
ಜರ್ಮನಿಯ ನಮ್ಮ ಕನ್ನಡ ಶಾಲೆಯ ಮಕ್ಕಳು ಹಾಗೂ ಬೋಧಕ ವರ್ಗ   

ಹುಬ್ಬಳ್ಳಿ: ಜರ್ಮನಿಯ ಮ್ಯೂನಿಕ್ ನಗರದಲ್ಲಿ ಆರಂಭಗೊಂಡಿರುವ ‘ನಮ್ಮ ಕನ್ನಡ ಶಾಲೆ ಜರ್ಮನಿ’ ಮತ್ತು ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ನಡುವೆ ಒಪ್ಪಂದವಾಗಿದ್ದು, ಕನ್ನಡ ಕಲಿಕೆ ಇನ್ನಷ್ಟು ವಿಸ್ತಾರ ಆಗಲಿದೆ.

‘ನಮ್ಮ ಕನ್ನಡ ಶಾಲೆ ಜರ್ಮನಿ’ ಮತ್ತು ಶಾಲಾ ಶಿಕ್ಷಣ ಇಲಾಖೆ ನಡುವೆ ಒಪ್ಪಂದ ಪ್ರಕ್ರಿಯೆ ಈಚೆಗೆ ಪೂರ್ಣಗೊಂಡಿದ್ದು, ನಲಿ–ಕಲಿ ಪಠ್ಯ ಕ್ರಮದ ಜೊತೆಗೆ ಇತರ ಹಂತದ ಕನ್ನಡ ಕಲಿಕೆಗೂ ಇದು ಪೂರಕವಾಗಲಿದೆ.

‘ಹೊರದೇಶದಲ್ಲಿ ನಲಿ–ಕಲಿ ಪಠ್ಯಕ್ರಮವನ್ನು ಪರಿಣಾಮಕಾರಿ ಸ್ವರೂಪದಲ್ಲಿ ಅನುಷ್ಠಾನಕ್ಕೆ ತರುವುದಕ್ಕಾಗಿ ನಮ್ಮ ಶಾಲೆಯನ್ನು ಪರಿಗಣಿಸಿರುವುದು ಖುಷಿಯ ಸಂಗತಿ. ಸಂಸದ ತೇಜಸ್ವಿಸೂರ್ಯ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಿತೇಶ್ ಕುಮಾರ್ ಸಿಂಗ್ ಈ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದು ಜರ್ಮನಿ ಶಾಲೆಯ ಆಡಳಿತಾಧಿಕಾರಿ ರಶ್ಮಿ ನಾಗರಾಜ್ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

ಒಪ್ಪಂದದ ಪ್ರಕಾರ, ಇಲಾಖೆಯು ಪಠ್ಯಕ್ರಮ ಒದಗಿಸುವುದರ ಜೊತೆಗೆ ಪರಿಶೀಲನೆಯನ್ನೂ ನಡೆಸಲಿದೆ. ಶಿಕ್ಷಕರಿಗೆ ಕಾರ್ಯಾಗಾರ, ಕ್ರಿಯಾ ಚಟುವಟಿಕೆ ಮತ್ತು ಮಕ್ಕಳ ಪ್ರಗತಿಯನ್ನೂ ಪರಿಶೀಲಿಸಲಾಗುವುದು. ಯುರೋಪ್‌ನ ಶಾಲೆಗಳಲ್ಲಿ ಕನ್ನಡವನ್ನು ಒಂದು ಕಲಿಕಾ ಭಾಷೆಯಾಗಿ ಸೇರಿಸಲು ರಾಜ್ಯ ಸರ್ಕಾರ ನೆರವಾಗಲಿದೆ.

‘ನಲಿ–ಕಲಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಶಾಲೆಯು ಯುರೋಪ್‌ ಖಂಡದಲ್ಲಿ ಕನ್ನಡ ಭಾಷೆಯನ್ನು ಕಲಿಸುವ ಅನೌಪಚಾರಿಕ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಆಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಶಿಕ್ಷಕಿ ಲತಾ ವೆಂಕಟಸ್ವಾಮಿ ತಿಳಿಸಿದರು.

2022ರಲ್ಲಿ ಆರಂಭಗೊಂಡ ಜರ್ಮನಿಯ ಶಾಲೆಯಲ್ಲಿ ಮಕ್ಕಳಿಗೆ ಆನ್‌ಲೈನ್‌ನಲ್ಲೂ ಪಾಠ ಮಾಡಲಾಗುತ್ತದೆ. ವಾರಕ್ಕೊಮ್ಮೆ ಎರಡೂವರೆ ಗಂಟೆ ನಡೆಯುವ ತರಗತಿಯಲ್ಲಿ ಕನ್ನಡದ ಜೊತೆಗೆ ಆಟ, ಕರಕುಶಲ ಕಲೆ, ಕಥೆ, ಪದ್ಯ ಹಾಗೂ ನಾಟಕಗಳನ್ನು ಹೇಳಿಕೊಡಲಾಗುತ್ತದೆ. 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಕರ್ನಾಟಕದಿಂದ ಉದ್ಯೋಗಕ್ಕಾಗಿ ಜರ್ಮನಿಯಲ್ಲಿ ನೆಲೆನಿಂತವರು ಉಚಿತವಾಗಿ ಪಾಠ ಮಾಡುತ್ತಾರೆ’ ಎಂದು ಶಾಲಾ ಶಿಕ್ಷಕಿ ಹೇಮಾ ಮಹಾದೇವಪ್ಪ ತಿಳಿಸಿದರು.


ನಮ್ಮ ಕನ್ನಡ ಶಾಲೆ ಜರ್ಮನಿ ಇ–ಮೇಲ್ ವಿಳಾಸ: nammakannadashaale.germany@gmail.com

ಜರ್ಮನಿಯ ನಮ್ಮ ಕನ್ನಡ ಶಾಲೆ ಲೋಗೊ
ರಶ್ಮಿ ನಾಗರಾಜ

ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಜೊತೆಗಿನ ಒಪ್ಪಂದವು ನಮ್ಮ ಕನ್ನಡ ಶಾಲೆಯ ಚಟುವಟಿಕೆಗಳನ್ನು ಜರ್ಮನಿಯಲ್ಲಿ ವಿಸ್ತರಿಸಲು ಮತ್ತು ಕನ್ನಡ ಕಲಿಸಲು ಪ್ರೇರಣೆ ನೀಡಿದೆ

–ರಶ್ಮಿ ನಾಗರಾಜ, ಸಂಚಾಲಕಿ ಆಡಳಿತಾಧಿಕಾರಿ ನಮ್ಮ ಕನ್ನಡ ಶಾಲೆ ಜರ್ಮನಿ

ಕೆ.ವಿ.ತ್ರಿಲೋಕಚಂದ್ರ

ಇದೇ ಮೊದಲ ಬಾರಿಗೆ ಹೊರದೇಶದಲ್ಲಿ ನಲಿ–ಕಲಿ ಪಠ್ಯಕ್ರಮದ ಮೂಲಕ ಕನ್ನಡ ಕಲಿಕೆಗೆ ಕರ್ನಾಟಕ ಶಿಕ್ಷಣ ಇಲಾಖೆ ವತಿಯಿಂದ ನಮ್ಮ ಕನ್ನಡ ಶಾಲೆ ಜರ್ಮನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

–ಕೆ.ವಿ.ತ್ರಿಲೋಕಚಂದ್ರ, ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.