ADVERTISEMENT

ಶಾಸಕರ ನೇತೃತ್ವದಲ್ಲಿ ‘ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ’ ರಚನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 15:52 IST
Last Updated 19 ಜನವರಿ 2025, 15:52 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ, ಮಾನವ ಸಂಪನ್ಮೂಲದ ಸಮರ್ಪಕ ಬಳಕೆ ಇತ್ಯಾದಿ ಅಂಶಗಳ ಕುರಿತು ಚರ್ಚಿಸಿ, ಸುಧಾರಣೆ ತರುವ ಉದ್ದೇಶದಿಂದ ‘ತಾಲ್ಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿ’ ರಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಈ ಸಮಿತಿ ರಚಿಸಬೇಕು ಎಂದು ಎಲ್ಲ ಉಪ ನಿರ್ದೇಶಕರಿಗೆ (ಆಡಳಿತ) ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರೌಢ ಶಿಕ್ಷಣ) ಸೂಚನೆ ನೀಡಿದ್ದಾರೆ. ಆಯಾ ತಾಲ್ಲೂಕು ವ್ಯಾಪ್ತಿಯ ಶಾಸಕರು ಈ ಸಮಿತಿಯ ಅಧ್ಯಕ್ಷರಾಗಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿ ಇರಲಿದ್ದಾರೆ.

ADVERTISEMENT

ತಹಶೀಲ್ದಾರ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್‌ರಾಜ್‌ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಾಲ್ಲೂಕಿನಲ್ಲಿ ಅತೀ ಹೆಚ್ಚು ದಾಖಲಾತಿ ಇರುವ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಡಯಟ್‌ನ ಹಿರಿಯ ಉಪನ್ಯಾಸಕರು (ಒಬ್ಬರು– ತಾಲ್ಲೂಕು ನೋಡಲ್‌ ಅಧಿಕಾರಿ), ತಾಲ್ಲೂಕಿನಲ್ಲಿ ಹೆಚ್ಚಿನ ದಾಖಲಾತಿ ಇರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎಸ್‌ಡಿಎಂ ಪ್ರತಿನಿಧಿಗಳು (ತಲಾ ಒಬ್ಬರು), ಸರ್ಕಾರ ನಾಮ ನಿರ್ದೇಶಿತ ಐವರು ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.

ಸರ್ಕಾರ ನಾಮನಿರ್ದೇಶನ ಮಾಡುವ ಐವರಲ್ಲಿ ಒಬ್ಬರು ಪದವೀಧರರು, ಉಳಿದಂತೆ ಎಸ್‌ಸಿ/ ಎಸ್‌ಟಿ, ಮಹಿಳೆ, ಹಿಂದುಳಿದ ಮತ್ತು ಸಾಮಾನ್ಯ ಗುಂಪಿನ ಇಬ್ಬರು ಇರಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಸಮಿತಿಯ ಕಾರ್ಯಗಳೇನು?: ತಾಲ್ಲೂಕಿನಲ್ಲಿ ಎಲ್ಲ ಅರ್ಹ ಮಕ್ಕಳ ಶಾಲಾ ದಾಖಲಾತಿ, ಹಾಜರಾತಿ ಮತ್ತು ಮಕ್ಕಳ ಕಲಿಕಾ ಮಟ್ಟವನ್ನು ವೃದ್ಧಿಸುವುದು, ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೆ ಶಾಲೆ ಬಿಟ್ಟು ಹೋಗುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ, ಸಿಎಸ್‌ಆರ್‌ ಕಾರ್ಯಕ್ರಮದ ಮೂಲಕ ನೆರವು ಒದಗಿಸುವುದು ಈ ಸಮಿತಿಯ ಕಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.