ADVERTISEMENT

ಉಪನ್ಯಾಸಕರ ವರ್ಗಾವಣೆಗೆ ಪಿಯು ‘ಫಲಿತಾಂಶ’ ಪರಿಗಣನೆ!

ವರ್ಗಾವಣೆ ತಿದ್ದುಪಡಿ ಕಾಯ್ದೆಯ ನಿಯಮಗಳಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 17:38 IST
Last Updated 11 ಏಪ್ರಿಲ್ 2022, 17:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವರ್ಗಾವಣೆ ಸಂದರ್ಭದಲ್ಲಿ ಅವರು ಕರ್ತವ್ಯ ನಿರ್ವಹಿಸುವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಆಧರಿಸಿ ಹೆಚ್ಚುವರಿ ಅಂಕಗಳನ್ನು ಪರಿಗಣಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಅಂಶ ಅಳವಡಿಸಿ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ –2022’ಯ ನಿಯಮ ರೂಪಿಸಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.

ಅಲ್ಲದೆ, ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವರ್ಗಾವಣೆ ಪ್ರಮಾಣವನ್ನು ಶೇ 5ರಿಂದ ಈ ಬಾರಿ ಶೇ 10ಕ್ಕೆ ಹೆಚ್ಚಿಸಲಾಗಿದೆ. ಮಹಿಳೆ ಮತ್ತು ಪುರುಷ ಉದ್ಯೋಗಿಗಳನ್ನು ಸಮಾನವಾಗಿ ಪರಿಗಣಿಸಿ, ಸೇವಾ ಜ್ಯೇಷ್ಠತೆ ಆಧಾರದಲ್ಲಿ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

ADVERTISEMENT

ಕಾಯ್ದೆಗೆ ರೂಪಿಸಿದ ನಿಯಮಗಳ ಪ್ರಕಾರ, ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮತ್ತು ಉಪನ್ಯಾಸಕರು ಬೋಧನೆ ಮಾಡುವ ವಿಷಯಗಳಲ್ಲಿ ಹಿಂದಿನ ಮೂರು ವರ್ಷ ಶೇ 80ಕ್ಕಿಂತ ಹೆಚ್ಚು ಫಲಿತಾಂಶ ಬಂದಿದ್ದರೆ, ಅಂತಹ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುತ್ತದೆ. ಕಾಲೇಜು ಶೇ 60ರಿಂದ ಶೇ 80ರಷ್ಟು ಫಲಿತಾಂಶ ಪಡೆದಿದ್ದರೆ 5 ಅಂಕಗಳನ್ನು ನೀಡಲಾಗುತ್ತದೆ.

ಕಾಯ್ದೆಗೆ ತಿದ್ದುಪಡಿಯ ಮೂಲಕ, ಮೊದಲ ಬಾರಿಗೆ ಉಪನ್ಯಾಸಕರು– ವಿದ್ಯಾರ್ಥಿಗಳ ಅನುಪಾತವನ್ನು ನಿಗದಿಪಡಿಸಲಾಗಿದೆ. ಅದರ ಪ್ರಕಾರ, 160 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು (160:1) ನಿಗದಿಪಡಿಸಲಾಗಿದೆ. ಪ್ರಾಯೋಗಿಕ ವಿಷಯಗಳಿಗೆ ವಿದ್ಯಾರ್ಥಿ– ಶಿಕ್ಷಕರ ಅನುಪಾತ 320:1 ಆಗಿದೆ.

ಮೊದಲ ಬಾರಿಗೆ ಕಾಲೇಜುಗಳಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ, ಕಾಲೇಜುಗಳನ್ನು ‘ಎ’, ‘ಬಿ’, ‘ಸಿ’ ಎಂದು ವಲಯ‌ ವಿಂಗಡಿಸಲಾಗಿದೆ. 100 ವಿದ್ಯಾರ್ಥಿಗಳಿರುವ ಕಾಲೇಜು ‘ಎ’ ವಲಯ, 101ರಿಂದ 500 ವಿದ್ಯಾರ್ಥಿಗಳಿರುವ ಕಾಲೇಜು ‘ಬಿ’, 1,001ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜನ್ನು ‘ಸಿ’ ವಲಯ ಎಂದು ವಿಂಗಡಿಸಲಾಗಿದೆ.

ತಿದ್ದುಪಡಿಗೂ ಮೊದಲಿನ ಕಾಯ್ದೆಯಲ್ಲಿ, ಮಹಾನಗರಪಾಲಿಕೆ ವ್ಯಾಪ್ತಿಯ ಕಾಲೇಜುಗಳನ್ನು ‘ಎ’, ನಗರಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿರುವ ಕಾಲೇಜನ್ನು ‘ಬಿ’, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾಲೇಜುಗಳನ್ನು ‘ಸಿ’ ವಲಯಗಳೆಂದು ಗುರುತಿಸಿ, ಸೇವಾ ಜ್ಯೇಷ್ಠತೆಯ ಆಧಾರದಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ‘ಸಿ’ ವಲಯದಲ್ಲಿ ಕೆಲಸ ಮಾಡುವ ಉಪನ್ಯಾಸಕರಿಗೆ 3 ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ, ಇನ್ನು ಮುಂದೆ 100ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜು ‘ಸಿ’ ವಲಯಕ್ಕೆ ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.