ADVERTISEMENT

‘ಉಪ’ಕಣದಲ್ಲಿ ಪಾಪ, ಪುಣ್ಯ

ಪುತ್ರ ಶೋಕ ಪಾಪದ ಫಲ– ರೆಡ್ಡಿ: ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:37 IST
Last Updated 30 ಅಕ್ಟೋಬರ್ 2018, 20:37 IST
.
.   

ಬೆಂಗಳೂರು/ಶಿವಮೊಗ್ಗ: ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ‘ಪುತ್ರ ಶೋಕ’ವನ್ನು ಪಾಪದ ಫಲ ಎಂದು ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹೇಳಿರುವ ಮಾತು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ರೆಡ್ಡಿ ಮಾತಿಗೆ ವಿನಮ್ರವಾಗಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ.

ಈ ಎರಡೂ ಮಾತುಗಳು ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಕೆಟ್ಟ–ಒಳ್ಳೆಯ ನಡಾವಳಿಗಳ ಬಗ್ಗೆ ವಿಶ್ಲೇಷಣೆಯೂ ಆರಂಭವಾಗಿದೆ.

ADVERTISEMENT

ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳ ಮತದಾನದ ದಿನ ಸಮೀಪಿಸುತ್ತಿದ್ದಂತೆ, ರಾಜಕೀಯ ನಾಯಕರು ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ರೆಡ್ಡಿ, ‘ಬಳ್ಳಾರಿಗೆ ಮರಳಿ ಬಂದು ರಾಜ್ಯ ರಾಜಕಾರಣ‌ದಲ್ಲಿ ಸಕ್ರಿಯವಾಗಬೇಕೆಂಬ ಆಸೆ ಇದೆ. ಅದಕ್ಕೆ ಕಣ್ಣೀರು ಹಾಕಲ್ಲ, ಹೋರಾಡುತ್ತೇನೆ. ಸಿದ್ದರಾಮಯ್ಯ ನನಗೆ ಮಾಡಿದ ಅನ್ಯಾಯಕ್ಕೆ ದೇವರು ಅವರ ಮಗನನ್ನು ದೂರ ಮಾಡಿದ್ದಾನೆ. ಅನ್ಯಾಯವಾಗಿ ಜೈಲಿಗೆ ಕಳುಹಿಸಿದರು. ಪೊಲೀಸನ ಮಗ ಅಕ್ರಮ ಮಾಡಲು ಸಾಧ್ಯವಿಲ್ಲ. ಅಕ್ರಮ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

‘ನನ್ನ ಕುಟುಂಬದಿಂದ ದೂರ ಮಾಡಿದ ಪಾಪ ಅವರಿಗೆ ತಟ್ಟಿದೆ. ದೇವರು ಅವರಿಗೆ ಅದೇ ಶಿಕ್ಷೆ ಕೊಟ್ಟಿದ್ದಾನೆ. ಕುಮಾರಸ್ವಾಮಿ ಮೇಲೆ ನೂರೈವತ್ತು ಕೋಟಿ ಆರೋಪ ಮಾಡಿದಾಗ ಡಿ.ಕೆ. ಶಿವಕುಮಾರ್‌ ನನ್ನ ಜೊತೆಗೆ ಇದ್ದರು. ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಈಗ ದೇವರು ನನ್ನ ಜೊತೆಗೆ ಇದ್ದಾನೆ. ನಾಗೇಂದ್ರ, ಆನಂದ್ ಸಿಂಗ್ ಒತ್ತಡದಲ್ಲಿ ಇದ್ದಾರೆ. ಅವರು ವಾಪಸ್ ಬರುತ್ತಾರೆ’ ಎಂದರು.

‘ಮಗನ ಸಾವು ಸಿದ್ದರಾಮಯ್ಯನವರಿಗೆ ದೇವರು ಕೊಟ್ಟ ಶಿಕ್ಷೆ ಎಂದಿರುವ ರೆಡ್ಡಿಗೆ ಮನುಷ್ಯತ್ವ ಇಲ್ಲ. ಮನುಷ್ಯತ್ವ ಇರುವವರು ಈ ರೀತಿಯ ಹೇಳಿಕೆ ಕೊಡುವುದಿಲ್ಲ’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಎಂ. ಸಿ. ವೇಣುಗೋಪಾಲ್‌ ಕಿಡಿಕಾರಿದ್ದಾರೆ.

ಜಾತ್ಯತೀತ ಪಕ್ಷಗಳಿಗೆ ಪರೀಕ್ಷೆ: ಬಳ್ಳಾರಿಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ‘ರಾಜ್ಯದ ಐದು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯು ದೇಶದ ಎಂಟು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜಾತ್ಯತೀತ ಪಕ್ಷಗಳು ಎದುರಿಸಲಿರುವ ಪರೀಕ್ಷೆಯಾಗಿದೆ’ ಎಂದು ಪ್ರತಿಪಾದಿಸಿದರು.

ಮೀ–ಟೂ’ನಲ್ಲಿ ಮುಖ್ಯಮಂತ್ರಿ: ಕುಮಾರ್ ಬಂಗಾರಪ್ಪ

‘ಸ್ಥಾನದ ಘನತೆ ಮರೆತು ಬೇರೆ ಕುಟುಂಬಗಳ ಖಾಸಗಿ ವಿಷಯಗಳಲ್ಲಿ ಮೂಗುತೂರಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸದ್ಯದಲ್ಲೇ ಮೀ ಟೂ ಅಭಿಯಾನದಲ್ಲಿ ಸಿಲುಕಲಿದ್ದಾರೆ’ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿರುವುದೂ ಚರ್ಚೆಗೆ ಕಾರಣವಾಗಿದೆ.

‘ಮೀ ಟೂನಲ್ಲಿ ಮುಖ್ಯಮಂತ್ರಿ ವಿರುದ್ಧ ಯಾರು ಹೇಳಿಕೆ ನೀಡುತ್ತಾರೆ. ನಿಮ್ಮ ಬಳಿ ದಾಖಲೆ ಇವೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ‘ಯಾರನ್ನು ಇಟ್ಟುಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೇ ದಾಖಲೆಗಳುಇವೆ. ರಾಮನಗರದಲ್ಲಿ ಪತ್ನಿಯನ್ನು ಅಭ್ಯರ್ಥಿ ಮಾಡಿದ್ದಾರೆ. ಹಾಗೆಯೇ ಅವರಿಗೂ ಒಂದು ಕ್ಷೇತ್ರ ನೀಡಿ ಗೆಲ್ಲಿಸಲಿ’ ಎಂದು ವ್ಯಂಗ್ಯವಾಡಿದರು.

ಈ ಮಾತಿಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಹಾಗಾಗಿ, ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ಕುಮಾರ್‌ ಬಂಗಾರಪ್ಪ ಕೀಳು ಮಟ್ಟದಲ್ಲಿ ವರ್ತಿಸಿದ್ದಾರೆ. ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ; ಚುನಾವಣಾ ವಿಚಾರಗಳಿದ್ದರೆ ಚರ್ಚೆಗೆ ಸಿದ್ಧ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.