ADVERTISEMENT

ಡಿ. 30ರಿಂದ ಕಾಂಗ್ರೆಸ್ ಬಸ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 21:30 IST
Last Updated 19 ಡಿಸೆಂಬರ್ 2022, 21:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಳಗಾವಿ: ‘ಇದೇ 30ರಿಂದ ಕಾಂಗ್ರೆಸ್‌ ನಾಯಕರಿಂದ ಬಸ್ ಯಾತ್ರೆ ಆರಂಭವಾಗಲಿದ್ದು, ಮೊದಲ ದಿನ ವಿಜಯಪುರದಲ್ಲಿ ಕೃಷ್ಣ ನೀರು ಹಂಚಿಕೆ ವಿಚಾರವಾಗಿ ಸಮಾವೇಶ ನಡೆಯಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಜ.2ರಂದು ಮಹದಾಯಿ ವಿಚಾರವಾಗಿ ಹೋರಾಟ, ಜ. 8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

‘ಬಸ್ ಯಾತ್ರೆ ಜ.10 ರಂದು ಬೆಳಗಾವಿಗೆ ಬರಲಿದ್ದು, 11ರಂದು ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಭೆ ನಡೆಯಲಿದೆ. ನಂತರ ನಾಲ್ಕು ದಿನ ವಿಶ್ರಾಂತಿ ಪಡೆದು, 16ರಂದು ಹೊಸಪೇಟೆಗೆ ತೆರಳುತ್ತೇವೆ’ ಎಂದು ವಿವರಿಸಿದರು.

ADVERTISEMENT

ಹೊಸಪೇಟೆ ಮತ್ತು ಕೊಪ್ಪಳದಲ್ಲಿ ಜ. 17ರಂದು, 18 ರಂದು ಬಾಗಲಕೋಟೆ ಮತ್ತು ಗದಗ, 19ರಂದು ಹಾವೇರಿ ಮತ್ತು ದಾವಣಗೆರೆಯಲ್ಲಿ ಯಾತ್ರೆ ನಡೆಯಲಿದೆ. 21ರಂದು ಹಾಸನ ಮತ್ತು ಚಿಕ್ಕಮಗಳೂರು, 22ರಂದು ಉಡುಪಿ ಮತ್ತು ದಕ್ಷಿಣ ಕನ್ನಡ, 23ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರವಾಸ ನಡೆಯಲಿದೆ ಎಂದು ಹೇಳಿದರು.

24 ರಂದು ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ, 26 ರಂದು ಮೈಸೂರು ಹಾಗೂ ಚಾಮರಾಜನಗರ, 27 ರಂದು ಮಂಡ್ಯ ಹಾಗೂ ರಾಮನಗರ, 28 ರಂದು ಯಾದಗಿರಿ ಹಾಗೂ ಬೀದರ್ ಯಾತ್ರೆ ನಡೆಯಲಿದೆ. ಉತ್ತರ ಕನ್ನಡ, ರಾಯಚೂರು, ಕೊಡಗು ಹಾಗೂ ಬಳ್ಳಾರಿ ಭಾಗದ ಪ್ರವಾಸದ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ
ಯಾತ್ರೆ ನಡೆಸಲಿದ್ದೇವೆ. ಈ ಯಾತ್ರೆ ನಂತರ 2 ತಂಡ ಮಾಡಿಕೊಂಡು 224 ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇವೆ. ನಾನು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಹಾಗೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ
ಪ್ರವಾಸ ಮಾಡಲಿದ್ದಾರೆ. ನಂತರ ಕರಾವಳಿ ಹಾಗೂ ಬೆಂಗಳೂರು ಭಾಗದಲ್ಲಿ ಇಬ್ಬರೂ ಒಟ್ಟಿಗೆ ಪ್ರವಾಸ ಮಾಡುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.