ADVERTISEMENT

ನೆರೆ-ವೈಮಾನಿಕ ಸಮೀಕ್ಷೆ | ಪರಿಹಾರ ಘೋಷಿಸಿಯೇ ಸಿಎಂ ಕಲಬುರಗಿಗೆ ಬರಲಿ: ವಿಜಯೇಂದ್ರ

ಮುಖ್ಯಮಂತ್ರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:31 IST
Last Updated 30 ಸೆಪ್ಟೆಂಬರ್ 2025, 5:31 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ರೈತರು ಸಂಕಷ್ಟದಲ್ಲಿದ್ದಾರೆ. ವೈಮಾನಿಕ ಸಮೀಕ್ಷೆಗೆ ಕಲಬುರಗಿಗೆ ಬರುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಘೋಷಿಸಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

‘ಸಂಕಷ್ಟದಲ್ಲಿರುವ ರೈತರು ರಾಜ್ಯ ಸರ್ಕಾರದ ಕಡೆಗೆ ನೋಡುತ್ತಿದ್ದಾರೆ. ಆದರೆ, ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಕೃಷಿ ಸಚಿವರು, ಕಂದಾಯ ಸಚಿವರು ಬೆಂಗಳೂರಿನಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲೇ ಕುಳಿತು ಈಗಷ್ಟೇ ರೈತರ ಸಮಸ್ಯೆ ಚರ್ಚಿಸಲು ಆರಂಭಿಸಿದ್ದಾರೆ’ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಟೀಕಿಸಿದರು.

ADVERTISEMENT

‘ಎಲ್ಲ ಸಚಿವರು ವೈಮಾನಿಕ ಸಮೀಕ್ಷೆಯನ್ನೇ ಮಾಡುವುದಾದರೇ ಜನಪ್ರತಿನಿಧಿಗಳು ಏಕೆ ಬೇಕು? ಅದನ್ನೇ ಅಧಿಕಾರಗಳೇ ಮಾಡಬಹುದು. ಕಲಬುರಗಿಗೆ ಬಂದು ಪ್ರವಾಸ ಮಾಡಿ, ಸಭೆ ನಡೆಸಿ ಎರಡು ದಿನಗಳಾದ ಬಳಿಕ ಕೇಂದ್ರಕ್ಕೆ ಪರಿಹಾರಕ್ಕಾಗಿ ಪತ್ರ ಬರೆದಿದ್ದೇವೆ ಎಂದು ಹೇಳುವುದು ರಾಜ್ಯ ಸರ್ಕಾರ ಕೆಲಸವಲ್ಲ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಏನೂ ಕೊಡಬೇಕೋ ಅದನ್ನು ಕೊಟ್ಟೇ ಕೊಡುತ್ತದೆ. ಆದರೆ, ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇರುತ್ತದೆ. ಮುಖ್ಯಮಂತ್ರಿ ಅವರು ಎಲ್ಲ ಉಸ್ತುವಾರಿ ಸಚಿವರನ್ನು ತಾಲ್ಲೂಕು, ಜಿಲ್ಲೆಗಳಿಗೆ ಕಳುಹಿಸಿ ರೈತರ ಸಂಕಷ್ಟ, ಸಮಸ್ಯೆ ಅರಿತು ಪರಿಹಾರ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡುವುದು ಎಷ್ಟು ಮುಖ್ಯವೋ, ಆ ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಿ ಸಾಂತ್ವನ ಹೇಳುವುದೂ ಅಷ್ಟೇ ಮುಖ್ಯ. ಈ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಮುಖ್ಯಮಂತ್ರಿ ಅವರು ತಮ್ಮ ಉಸ್ತುವಾರಿ ಸಚಿವರು, ಕೃಷಿ ಸಚಿವರು, ಕಂದಾಯ ಸಚಿವರು ಒಂದು ತಿಂಗಳು ಬೆಂಗಳೂರಿಗೇ ಬರದಂತೆ ಹೇಳಬೇಕು. ಅವರಿಗೆಲ್ಲ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುವಂತೆ ಹೇಳಬೇಕು’ ಎಂದು ಒತ್ತಾಯಿಸಿದರು.

‘ಒಂದು ತಿಂಗಳ ಹಿಂದೆ ಸಂಕಷ್ಟದಲ್ಲಿದ್ದ ರೈತರೊಬ್ಬರು ಬೆಳೆ ಹಾನಿ ಬಗೆಗೆ ಅಳಲು ತೋಡಿಕೊಳ್ಳುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಸಹಾಯಕರಾಗಿ ಮಾತನಾಡಿದರು. ಖರ್ಗೆ ಕುಟುಂಬಕ್ಕೆ ಪರಿಹಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ನೀಡಲಿ. ಅದರೊಂದಿಗೆ ಸಂಕಷ್ಟದಲ್ಲಿರುವ ಅನ್ನದಾತರಿಗೂ ಪರಿಹಾರ ಕೊಡುವ ಕೆಲಸ ರಾಜ್ಯ ಸರ್ಕಾರ ಮಾಡಲಿ’ ಎಂದು ಒತ್ತಾಯಿಸಿದರು.

‘ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ₹25ರಿಂದ ₹30 ಸಾವಿರ ಪರಿಹಾರ ಘೋಷಿಸಬೇಕು. ಮನೆಗಳನ್ನು ಕಳೆದುಕೊಂಡಿರುವವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮುಖಂಡರಾದ ಎ.ಎಸ್‌.ಪಾಟೀಲ ನಡಹಳ್ಳಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಾಸಕ ಬಸವರಾಜ ಮತ್ತಿಮಡು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.