ADVERTISEMENT

ಪ್ರವಾಹ: ಸಾಂಕ್ರಾಮಿಕ ರೋಗದ ಅಪಾಯ

ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಚಿವ ಸುಧಾಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:13 IST
Last Updated 23 ಜುಲೈ 2021, 16:13 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಅಪಾಯ ಎದುರಾಗಿದೆ. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಗ್ರಾಮಗಳು ಹಾಗೂ ಸ್ಥಳಾಂತರಗೊಂಡಿರುವ ಗ್ರಾಮಗಳ ಸಂತ್ರಸ್ತರಿಗೆ ತೆರೆಯುವ ಕಾಳಜಿ ಕೇಂದ್ರಗಳ ಬಳಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಅವರು ಸಭೆ ನಡೆಸಿದರು.

‘ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಸಮೀಪದಲ್ಲಿ ಇಲ್ಲದಿದ್ದರೆ ಲಭ್ಯವಿರುವ ನೀರನ್ನೇ ಕಾಯಿಸಿ, ಶೋಧಿಸಿ ನೀಡಬೇಕು. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಪ್ರತಿದಿನ ರೋಗನಿರೋಧಕ ದ್ರಾವಣ ಸಿಂಪಡಿಸಿ, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು. ಅಲ್ಲಿ ವಾಸ ಇರುವವರಿಗೆ ಕೋವಿಡ್‌ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ವೈದ್ಯಕೀಯ ತಜ್ಞರು ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು. ವಿಶೇಷ ಕಾಳಜಿಯಿಂದ ಅವರನ್ನು ನೋಡಿಕೊಳ್ಳಬೇಕು. ಜ್ವರ ಹಾಗೂ ಇತರೆ ರೋಗಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್‌ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಬೇಕು’ ಎಂದರು.

ಆರೋಗ್ಯ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್‌ ಪಾಟೀಲ್‌ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.