ADVERTISEMENT

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗಬೇಕಿಲ್ಲ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 16:47 IST
Last Updated 20 ಸೆಪ್ಟೆಂಬರ್ 2019, 16:47 IST
   

ಬೆಳಗಾವಿ: ‘‌‌‌ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 14ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವಂತೆ ಮಾಡಲಾಗಿದೆ. ಹೀಗಾಗಿ, ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರದ ಮೊರೆ ಹೋಗಬೇಕಿಲ್ಲ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅತಿವೃಷ್ಟಿಯಾದ ಸಂದರ್ಭಗಳಲ್ಲಿ ರಾಜ್ಯವು ಕೇಂದ್ರದ ಕದ ತಟ್ಟದಿರಲೆಂಬ ಉದ್ದೇಶದಿಂದ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ, ಪರಿಹಾರದ ಹಣಕ್ಕಾಗಿ ಹಿಂದಿನಂತೆ ಕೇಂದ್ರಕ್ಕೆ ಹೋಗುವ ಅಗತ್ಯವಿಲ್ಲ. ಆರ್ಥಿಕವಾಗಿ ಸದೃಢವಾಗಿರುವ ರಾಜ್ಯ ಸರ್ಕಾರವೇ ನೆರೆ ಪರಿಹಾರ ಘೋಷಿಸಿದೆ’ ಎಂದು ಸಮರ್ಥಿಸಿಕೊಂಡರು.

‘ರಕ್ಷಣಾ ಕಾರ್ಯಕ್ಕೆ ಬಂದಿದ್ದ ಎನ್.ಡಿ.ಆರ್.ಎಫ್ ತಂಡ ಹಾಗೂ ಸೇನೆಯನ್ನು ಕೇಂದ್ರ ಕಳುಹಿಸಿದೆ. ವೈಮಾನಿಕ ಸಮೀಕ್ಷೆ ನಡೆಸಿದ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಕೇಂದ್ರದ ಪ್ರತಿನಿಧಿಗಳು. ಈ ವಯಸ್ಸಿನಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎನ್ನುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವೆರಿಗೆ ತಿರುಗೇಟು ನೀಡಿದರು.

ADVERTISEMENT

‘ಪ್ರವಾಹವನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ‌ನಾಯಕರು ರಾಜಕೀಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೇ ಹಣ ನೀಡುತ್ತಿದೆ. ಕೇಂದ್ರವೇ ಘೋಷಿಸಬೇಕೆಂಬ ಹಠ ಕಾಂಗ್ರೆಸ್‌ನವರಿಗೇಕೆ? ಹಾನಿಯ ವರದಿ ಸಲ್ಲಿಸಲಾಗಿದ್ದು, ಕೇಂದ್ರವೂ ಸ್ಪಂದಿಸುವ ಭರವಸೆ ಇದೆ‌. ಎರಡೂ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.