ಬೆಂಗಳೂರು: ರಾಜ್ಯದ ಐವರು ವಿದ್ಯಾರ್ಥಿನಿಯರು ಚಿವೆನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನಕ್ಕೆ ಭಾಜನರಾಗಿದ್ದಾರೆ.
ತಲಾ ₹40 ಲಕ್ಷ ಒಳಗೊಂಡ ವಿದ್ಯಾರ್ಥಿ ವೇತನವನ್ನು ಬ್ರಿಟಿಷ್ ಹೈಕಮಿಷನ್ ಹಾಗೂ ರಾಜ್ಯ ಸರ್ಕಾರ ಸಮಾನವಾಗಿ ಭರಿಸಲಿವೆ. ಆಯ್ಕೆಯಾದ ವಿದ್ಯಾರ್ಥಿನಿಯರು ಬ್ರಿಟನ್ನಿನ ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಬಹುದು.
ಮೌಂಟ್ ಕಾರ್ಮೆಲ್ ಕಾಲೇಜಿನ ನಿಹಾರಿಕಾ ನರೇಶ್, ಮಣಿಪಾಲ್ ತಾಂತ್ರಿಕ ಮಹಾವಿದ್ಯಾಲಯದ ಸುಷ್ಮಾ ಶಾಮಸುಂದರ್, ಜೆಎಸ್‌ಎಸ್ ಕಾಲೇಜಿನ ಚಂದನಾ ಆಂಜಿನಪ್ಪ, ಕ್ರೈಸ್ಟ್ ವಿಶ್ವವಿದ್ಯಾಲಯದ ಅತಿನಾ ರೋಸ್ ಜೋಸೆಫ್ ಹಾಗೂ ಮೈಸೂರು ವಿಶ್ವವಿದ್ಯಾಲಯದ ಶ್ವೇತಾ ನಾಗಪತಿ ಹೆಗಡೆ ಆಯ್ಕೆಯಾದ ವಿದ್ಯಾರ್ಥಿನಿಯರು.
ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಗುರುವಾರ ಸನ್ಮಾನಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸುಧಾಕರ್ ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ಬ್ರಿಟಿಷ್ ಹೈ ಕಮಿಷನ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿವೇತನ ಸ್ಥಾಪಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದಿಂದ ಪ್ರತಿ ವರ್ಷ ಐವರು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.