ADVERTISEMENT

ಬಿಜೆಪಿಯಲ್ಲಿ ಹೆಚ್ಚಿದ ಬೇಗುದಿ: ಅನುದಾನಕ್ಕೆ ತಕರಾರು, ಶಾಸಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:49 IST
Last Updated 14 ಮಾರ್ಚ್ 2020, 19:49 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ಒಳಬೇಗುದಿ, ಅಸಹನೆ ಹೆಚ್ಚುತ್ತಿದೆ. ಪಕ್ಷದ ನಾಯಕರು, ಶಾಸಕರು ಪ್ರತ್ಯೇಕವಾಗಿ ಗುಂಪುಗೂಡುತ್ತಿರುವುದು ಇದಕ್ಕೆ ಸಾಕ್ಷಿಯಾಗುವಂತಿದೆ.

ಶುಕ್ರವಾರ ಬೆಂಗಳೂರಿಗೆ ಬಂದಿದ್ದ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ನಡೆಯಬೇಕಿದ್ದ ಆರ್‌ಎಸ್‌ಎಸ್‌ ಪ್ರತಿನಿಧಿ ಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಇಲ್ಲಿಯೇ ಉಳಿದುಕೊಂಡಿದ್ದರು. ಸಭೆ ನಡೆಯಲಿದ್ದ ಚನ್ನೇನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿಯಾದ ನಡ್ಡಾ, ಕೆಲ ಹೊತ್ತು ಸಮಾಲೋಚನೆ ನಡೆಸಿದರು.

‘ಶನಿವಾರ ಬೆಳಿಗ್ಗೆ ನಡೆದ ಬಿಜೆಪಿ ಪ್ರಮುಖರ ಸಮಿತಿ ಸಭೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾಗವತ್‌ ಹಾಗೂ ನಡ್ಡಾ ಭೇಟಿ ಮಾಡಲು ನಿರ್ಧರಿಸಿದರು. ಆ ವೇಳೆ, ಅಲ್ಲಿಯೇ ಇದ್ದ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಅವರನ್ನು ತಮ್ಮೊಂದಿಗೆ ಬರುವಂತೆ ಕರೆದರು. ‘ತುರ್ತಾಗಿ ಹುಬ್ಬಳ್ಳಿಗೆ ಹೋಗುವುದಿದೆ’ ಎಂದ ಜೋಶಿ ಅವರ ಜತೆಗೆ ತೆರಳಲಿಲ್ಲ. ಬಳಿಕ, ಮತ್ತೊಬ್ಬ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಮನೆಗೆ ತೆರಳಿದ ಜೋಶಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜತೆ ನಡ್ಡಾ ಅವರನ್ನು ಭೇಟಿ ಮಾಡಲು ಚನ್ನೇನಹಳ್ಳಿಗೆ ಹೋದರು. ಹೀಗೆ, ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

ADVERTISEMENT

ಯಡಿಯೂರಪ್ಪ ಪ್ರತ್ಯೇಕವಾಗಿ ನಡ್ಡಾರನ್ನು ಭೇಟಿ ಮಾಡಿ ಚರ್ಚಿಸಿದರು. ಆದರೆ, ಈ ನಾಯಕರ ಭೇಟಿ ವೇಳೆ ನಡೆದ ಚರ್ಚೆಯ ಮಾಹಿತಿ ಬಹಿರಂಗವಾಗಿಲ್ಲ.

ನಡ್ಡಾ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುವ ಯತ್ನಗಳನ್ನು ಶಾಸಕರ ಪ್ರತ್ಯೇಕ ಗುಂಪುಗಳು ಶನಿವಾರ ನಡೆಸಿದವು. ಆದರೆ, ಸದ್ಯ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಅಸಹನೆಯ ಕುದಿ: ‘ಯಡಿಯೂರಪ್ಪ ಕೆಲಸ ಮಾಡಿ ಕೊಡುತ್ತಿಲ್ಲ ಎಂದು ಶಾಸಕರು ಅಸಹನೆಯಲ್ಲಿ ಕುದಿಯುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ’ ಎಂದು ಉತ್ತರ ಕರ್ನಾಟಕದ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕಾಂಗ ಪಕ್ಷದ ಸಭೆಯಲ್ಲಿ 20ಜನ ಅಸಹನೆ ವ್ಯಕ್ತಪಡಿಸಿದ್ದಾರೆ. ಆ ಪೈಕಿ 15 ಲಿಂಗಾಯತ ಶಾಸಕರು. ಅವರೆಲ್ಲರೂ ಯಡಿಯೂರಪ್ಪನವರ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಆದರೆ, ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊಂದಿದ್ದಾರೆ’ ಎಂದರು.

‘ಬಸನಗೌಡ ಪಾಟೀಲ ಯತ್ನಾಳ್ ಅವರು ಅನುದಾನ ಕೋರಿ ಯಡಿಯೂರಪ್ಪನವರ ಬಳಿ ಹೋದಾಗ, ವಿಜಯೇಂದ್ರನನ್ನು ನೋಡಿ ಎಂದರು. ‘ನಾನು ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿದ್ದೆ. ವಿಜಯೇಂದ್ರ ಬಳಿ ಹೋಗುವುದಿಲ್ಲ’ ಎಂದ ಯತ್ನಾಳ್‌, ಪತ್ರ ವಾಪಸ್ ಪಡೆದು ಬಂದರು. ವಿಧಾನಸೌಧದ ಮೆಟ್ಟಿಲೇರದ (ಶಾಸಕರಾಗಿ) ವಿಜಯೇಂದ್ರ ಅವರನ್ನು ಪ್ರತಿಯೊಂದು ಕೆಲಸಕ್ಕೆ ಕೈಚಾಚುವ ಪರಿಸ್ಥಿತಿ ಬಂದಿದೆ. ಇದು ಶೇ 80ರಷ್ಟು ಶಾಸಕರ ಸಿಟ್ಟಿಗೆ ಕಾರಣವಾಗಿದೆ’ ಎಂದು ಅವರು ವಿವರಿಸಿದರು.

‘ಶಾಸಕರೊಬ್ಬರು ₹5 ಕೋಟಿ ಅನುದಾನ ಕೇಳಿದಾಗ ‘ವಿಷ ಖರೀದಿಸಲೂ ದುಡ್ಡಿಲ್ಲ’ ಎಂದು ಯಡಿಯೂರಪ್ಪ ಹೇಳಿದ್ದರು. ಅದೇ ಶಾಸಕನ ಕ್ಷೇತ್ರಕ್ಕೆ ₹200 ಕೋಟಿ ಅನುದಾನವನ್ನು ಗುತ್ತಿಗೆದಾರರೊಬ್ಬರು ತಂದರು. ಇದನ್ನು ಸಹಿಸಿಕೊಂಡು ಹೇಗೆ ಸುಮ್ಮನಿರುವುದು’ ಎಂದು ಮತ್ತೊಬ್ಬ ಶಾಸಕರು ಆಕ್ರೋಶ ಹೊರಹಾಕಿದರು.

ಪ‍ರಿಷತ್‌ ಚುನಾವಣೆ: ಪುಟ್ಟಣ್ಣ, ಚಿದಾನಂದಗೌಡಗೆ ಟಿಕೆಟ್‌
ಇದೇ ವರ್ಷದ ಜೂನ್‌ನೊಳಗೆ ಚುನಾವಣೆ ನಡೆಯಬೇಕಿರುವ ವಿಧಾನಪರಿಷತ್‌ನ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರನ್ನು ಬಿಜೆಪಿ ಪ್ರಮುಖರ ಸಮಿತಿ ಅಂತಿಮಗೊಳಿಸಿದೆ.

ಸದ್ಯ ಜೆಡಿಎಸ್‌ನಿಂದ ಪ್ರತಿನಿಧಿಸುತ್ತಿರುವ ಪುಟ್ಟಣ್ಣ ಅವರಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಟಿಕೆಟ್‌ ನೀಡಲು ಪಕ್ಷ ಒಪ್ಪಿದೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಜಮೀರ್ ಅಹಮದ್ ಖಾನ್‌, ಚೆಲುವರಾಯಸ್ವಾಮಿ ಜತೆ ಪುಟ್ಟಣ್ಣ ಗುರುತಿಸಿಕೊಂಡಿದ್ದರು. ಆ ವೇಳೆ ಪುಟ್ಟಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಲಾಗಿತ್ತು.

ಸದ್ಯ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ ಪ್ರತಿನಿಧಿಸುತ್ತಿರುವ ಆಗ್ನೇಯ ಪದವೀಧರ ಕ್ಷೇತ್ರದಿಂದ ಮಾಧ್ಯಮ ಸಂಚಾಲಕ ಎ.ಎಚ್. ಆನಂದ್‌, ಶಿರಾದಲ್ಲಿ ಶಾಲೆ ನಡೆಸುತ್ತಿರುವ ಚಿದಾನಂದಗೌಡ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅಳಿಯ ಮಂಜುನಾಥ್ ಹೆಸರು ಮುಂಚೂಣಿಯಲ್ಲಿದ್ದವು. ಪ್ರಮುಖರ ಸಮಿತಿಯು ಚಿದಾನಂದಗೌಡ ಹೆಸರನ್ನು ಆಖೈರುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.