ADVERTISEMENT

ಜಿಂದಾಲ್‌ಗೆ ಭೂಮಿ: ಸರ್ಕಾರದ ಸಮರ್ಥನೆ, ಕೆಪಿಎಸ್‌ಸಿ ಸುಗ್ರೀವಾಜ್ಞೆಗೂ ಸಮ್ಮತಿ

ಕೆಪಿಎಸ್‌ಸಿ ಸುಗ್ರೀವಾಜ್ಞೆಗೂ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:45 IST
Last Updated 6 ಜೂನ್ 2019, 19:45 IST
   

ಬೆಂಗಳೂರು: ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವಾಗ ಆ ಕಂಪೆನಿಗೆ ಕೆಲವು ಷರತ್ತುಗಳನ್ನು ವಿಧಿಸಬೇಕು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಒತ್ತಾಯಿಸಿದರು.

ಕನ್ನಡಿಗರ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂಬುದು ಸಚಿವರ ಬಹು ಮುಖ್ಯ ಬೇಡಿಕೆಯಾಗಿತ್ತು. ಈ ಕುರಿತು ಸುದೀರ್ಘ ಚರ್ಚೆ ನಡೆಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಮಾರಾಟ ಸಮರ್ಥನೆ: ಜಿಂದಾಲ್‌ ಕಂಪನಿಯ ಕಾರ್ಖಾನೆ, ವಸತಿ ಸಮುಚ್ಛಯ, ವಿದ್ಯುತ್ ಉತ್ಪಾದನಾ ಘಟಕ ಇರುವ ಕಾಂಪೌಂಡ್‌ ಒಳಗಿನ ಜಾಗವನ್ನು ಮಾತ್ರ ಗುತ್ತಿಗೆ ಮತ್ತು ಮಾರಾಟದ ಕರಾರಿನ ಆಧಾರದ ಮೇಲೆ ಭೂಮಿಯನ್ನು ಮಾರಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸಮರ್ಥಿಸಿಕೊಂಡರು.

ADVERTISEMENT

ಲೀಸ್‌ ಕಂ ಸೇಲ್‌ ಡೀಡ್‌ 2006 ರಲ್ಲೇ ಆಗಿತ್ತು. ಕಂಪನಿಯು ಷರತ್ತುಗಳನ್ನು ಪೂರೈಸಿರುವುದು ತೃಪ್ತಿದಾಯಕವಾಗಿದ್ದರಿಂದ ಕಾನೂನು ಪ್ರಕಾರವೇ ಮಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಗಣಿಗಾರಿಕೆ ಭೂಮಿಯನ್ನು ಮಾರಾಟ ಮಾಡಿಲ್ಲ. ಗಣಿಗಾರಿಕೆಯನ್ನು ಲೀಸ್‌ ಆಧಾರದಲ್ಲಿಯೇ ನೀಡಲಾಗಿದೆ ಎಂದರು.

ಅಧಿಕಾರಿಗಳ ಹಿತ ಕಾಪಾಡುತ್ತೇವೆ:ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) 1998 ರ ಸಾಲಿನಲ್ಲಿ ನಡೆಸಿದ ಅಕ್ರಮ ನೇಮಕಾತಿಗಳನ್ನು ಸಕ್ರಮಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿದಿಲ್ಲ. ಬದಲಿಗೆ ಯಾವುದೇ ಅಧಿಕಾರಿಗಳಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸುಗ್ರೀವಾಜ್ಞೆಯಿಂದ ಸಾಕಷ್ಟು ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಶಾಸಕರು ಸ್ಪೀಕರ್‌, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಕುರಿತು ಸಚಿವ ಸಂಪುಟಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸುಗ್ರೀವಾಜ್ಞೆ ಹೊರಡಿಸುವಾಗ 1998 ರ ನಂತರ ನೇಮಕಗೊಂಡ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಮುಂಬಡ್ತಿಗೆ ಮತ್ತು ಅವರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಯಿತು. ಇದಕ್ಕಾಗಿ ಸೂಪರ್‌ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.