ADVERTISEMENT

ಡಿ.1ರಿಂದ ರಾಜೀವಗಾಂಧಿ ವಿವಿ ಆರಂಭ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 11:07 IST
Last Updated 13 ನವೆಂಬರ್ 2020, 11:07 IST
ಡಾ.ಕೆ.ಸುಧಾಕರ್‌
ಡಾ.ಕೆ.ಸುಧಾಕರ್‌   

ಚಿತ್ರದುರ್ಗ: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ನರ್ಸಿಂಗ್‌ ಕಾಲೇಜುಗಳು ಡಿ.1ರಿಂದ ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪದವಿ ಕಾಲೇಜು ನ.17ರಿಂದ ಆರಂಭವಾಗಲಿವೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಹೊರ ರಾಜ್ಯದಲ್ಲೂ ಇದ್ದಾರೆ. ಕಾಲೇಜಿಗೆ ಬರಲು ಅವರಿಗೆ ಕಾಲಾವಕಾಶದ ಅಗತ್ಯವಿದೆ. ಡಿ.1ರಿಂದ ತರಗತಿ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಶಾಲೆ ಪ್ರಾರಂಭಿಸುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯವಾಗಿದೆ. ಉನ್ನತ ಶಿಕ್ಷಣದ ಕಾಲೇಜುಗಳನ್ನು ಆರಂಭಿಸಿ ಪರಿಶೀಲಿಸಲಾಗುವುದು. ಈ ಅನುಭವದ ಆಧಾರದ ಮೇರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತೆರೆಯಲು ಆಲೋಚಿಸಲಾಗುದು’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವಾರದ ಏಳು ದಿನ 24 ಗಂಟೆ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗಿದೆ. ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್‌ ನೆರವಿನ ನಿರೀಕ್ಷೆಯಲ್ಲಿದೆ’ ಎಂದು ಮಾಹಿತಿ ನೀಡಿದರು.

ಕೋವಿಡ್‌ ಲಸಿಕೆ ಪ್ರಾಯೋಗಿಕ ಹಂತದಲ್ಲಿದೆ. ಪ್ರಯೋಗ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದ್ದು, ಜನವರಿ ನಂತರ ಬಳಕೆಗೆ ಸಿಗುವ ಸಾಧ್ಯತೆ ಇದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಡಾ.ಕೆ.ಸುಧಾಕರ್‌
ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.