ADVERTISEMENT

ಅಕ್ರಮ ವಿದೇಶಿಯರ ಪತ್ತೆ, ಗಡಿಪಾರಿಗೆ ಸಮಿತಿ

ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮಾಹಿತಿ * ಪ್ರತಿ ತಿಂಗಳೂ ಕೇಂದ್ರಕ್ಕೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:52 IST
Last Updated 16 ಜುಲೈ 2021, 19:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ, ಗಡಿಪಾರು ಮಾಡಲು ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದು, ಇತ್ತೀಚೆಗೆ ಬಾಂಗ್ಲಾ ಮಹಿಳೆಯ ಮೇಲೆ ಅದೇ ದೇಶದ ಪ್ರಜೆಗಳಿಂದ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಅವರ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೇ ರೀತಿ ಬಹಳಷ್ಟು ಜನ ವಾಸವಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಅಲ್ಲದೇ, ನೈಜಿರಿಯಾ ಮತ್ತು ಆಫ್ರಿಕಾ ಮೂಲದ ಪ್ರಜೆಗಳಿಂದ ಮಾದಕ ದ್ರವ್ಯ ಮಾರಾಟ, ವೇಶ್ಯಾವಾಟಿಕೆ ಹೆಚ್ಚಾಗಿದ್ದು, ಇವರಿಂದ ಅಪರಾಧ ಪ್ರಮಾಣವೂ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯದಲ್ಲಿ ವೀಸಾ ಅವಧಿ ಮುಗಿದ ಮೇಲೂ ಉಳಿದುಕೊಂಡಿರುವ ಮತ್ತು ನಾಪತ್ತೆಯಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲು ಈ ಸಮಿತಿಯು ಕಾರ್ಯೋನ್ಮುಖವಾಗಲಿದೆ. ಪತ್ತೆಯಾಗುವ ಅಕ್ರಮ ವಿದೇಶಿಗರನ್ನು ವಿಚಾರಣೆ ನಡೆಸಿ ಬಳಿಕ ಅವರ ದೇಶಗಳಿಗೆ ಗಡಿಪಾರು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ಈ ಪತ್ತೆ ಕಾರ್ಯಕ್ಕೆ ವಿದೇಶಿ ನೋಂದಣಾಧಿಕಾರಿಗಳ ಸಹಾಯ ಪಡೆದುಕೊಳ್ಳಲಾಗುವುದು. ಈ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗುವುದು ಎಂದು ಗೃಹ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರತಿ ತಿಂಗಳು ಪತ್ತೆಯಾದ ಮತ್ತು ಗಡಿಪಾರು ಮಾಡಲಾಗಿರುವ ವಿದೇಶಿ ಪ್ರಜೆಗಳ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಈ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ, ರಾಜ್ಯ ಗುಪ್ತ ವಾರ್ತೆ ಪೊಲೀಸ್‌ ಅಧೀಕ್ಷಕರು, ಸಂಬಂಧಪಟ್ಟ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಎನ್‌ಐಸಿ ಸಮಿತಿ ಸದಸ್ಯರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.