ADVERTISEMENT

ಕಾಲಮಿತಿಯಲ್ಲಿ ಹುದ್ದೆ ಭರ್ತಿ ಮಾಡಿ: ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 21:19 IST
Last Updated 25 ಫೆಬ್ರುವರಿ 2026, 21:19 IST
<div class="paragraphs"><p> ಧಾರವಾಡ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ</p></div>

ಧಾರವಾಡ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ

   

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಬಾಯಿಮಾತಿಗೆ ಹೇಳುವುದನ್ನು ಬಿಟ್ಟು, ಕಾಲಮಿತಿ ಹಾಕಿಕೊಂಡು ಕಾರ್ಯೋನ್ಮುಖರಾಗಬೇಕು’ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಅಧ್ಯಕ್ಷ ಕಾಂತಕುಮಾರ್ ಒತ್ತಾಯಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘56 ಸಾವಿರ ಹುದ್ದೆಗಳ ಶೀಘ್ರ ಭರ್ತಿಗೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.

ADVERTISEMENT

‘ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಅದಕ್ಕಿಂತ ಪೂರ್ವದಲ್ಲೇ ಅಧಿಸೂಚನೆ ಹೊರಡಿಸಬೇಕು. ಕಾಲಹರಣ ಮಾಡಿದರೆ ಉದ್ಯೋಗಾಕಾಂಕ್ಷಿಗಳಿಗೆ ನಷ್ಟ ಉಂಟಾಗಲಿದೆ’ ಎಂದು ತಿಳಿಸಿದರು.

‘ಹೋರಾಟದ ಭಾಗವಾಗಿ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡು, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. ವಿದ್ಯಾರ್ಥಿಗಳು, ಪೋಷಕರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದವರ ಬೆಂಬಲ ‍ಪಡೆದುಕೊಳ್ಳಲಾಗುವುದು’ ಎಂದು ಹೇಳಿದರು. 

‘ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ನೇಮಕಾತಿ ಮಾಡಿಕೊಳ್ಳಲು ಹೊಸದಾಗಿ ಒಂದೂ ಅಧಿಸೂಚನೆ ಹೊರಡಿಸಿಲ್ಲ. ಈ ವಿಚಾರವಾಗಿ ಹೋರಾಟ ಮಾಡಲು ಮುಂದಾದಾಗಲೆಲ್ಲ ಪೊಲೀಸರನ್ನು ಮುಂದೆ ಬಿಟ್ಟು ನಮ್ಮನ್ನು ಹತ್ತಿಕ್ಕಲಾಗುತ್ತಿತ್ತು’ ಎಂದರು.

‘ಹತಾಶೆಯಲ್ಲಿ ಯುವಜನರು’: 

 ‘ಉದ್ಯೋಗ ಸಿಗದೆ ಯುವಜನರು ಹತಾಶರಾಗಿದ್ದಾರೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ವಿಧಾನಸೌಧದಲ್ಲೂ ಧ್ವನಿ ಎತ್ತುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು. 

‘ಆರ್ಥಿಕ ಇಲಾಖೆಯು 55 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೇ ಈ ಇಲಾಖೆ ಇರುವುದರಿಂದ ಅವರು ಇನ್ನುಳಿದ 2.3 ಲಕ್ಷ ಹುದ್ದೆ ಭರ್ತಿಗೂ ಅನುಮತಿ ಪಡೆದು ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿ’ ಎಂದು ಒತ್ತಾಯಿಸಿದರು.

ಪ‍್ರತಿಭಟನೆಯನ್ನು ಪೂರ್ಣವಾಗಿ ಐದು ಡ್ರೋನ್‌ 20ಕ್ಕೂ ಹೆಚ್ಚು ಖಾಸಗಿ ವಿಡಿಯೊಗ್ರಾಫರ್‌ಗಳ ಮೂಲಕ ಚಿತ್ರೀಕರಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳು ಇವೆ. ಕಾನೂನು ಉಲ್ಲಂಘನೆ ಪ್ರಕರಣ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು
ಎನ್‌.ಶಶಿಕುಮಾರ್‌, ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌
ಕಾಂಗ್ರೆಸ್ ಸರ್ಕಾರದ ಕೆಟ್ಟ, ಕೊಳಕು ಆಡಳಿತದಿಂದ ಉದ್ಯೋಗಾಕಾಂಕ್ಷಿಗಳು ಸೇರಿದಂತೆ ಸಮಾಜದ ಪ್ರತಿ ವರ್ಗ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ‘ಅರಾಜಕತೆ ಗ್ಯಾರಂಟಿ’ ಕಾಂಗ್ರೆಸ್‌ ಸರ್ಕಾರದ 6ನೇ ಗ್ಯಾರಂಟಿಯಾಗಿದೆ
ಆರ್. ಅಶೋಕ, ವಿಧಾನಸಭೆ ವಿರೋಧಪಕ್ಷದ ನಾಯಕ
ವಿದ್ಯಾರ್ಥಿ ಒಕ್ಕೂಟದಿಂದ ವಿವಿಧೆಡೆ ಹೋರಾಟ ನಡೆದಿದೆ. ಆದರೆ, ರಾಜ್ಯ ಸರ್ಕಾರವು ಕುಂಭಕರ್ಣ ನಿದ್ರೆಯಲ್ಲಿದೆ. ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡದಿದ್ದರೆ ಬಿಜೆಪಿಯಿಂದಲೇ ಹೋರಾಟ ಹಮ್ಮಿಕೊಳ್ಳಲಾಗುವುದು
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.