ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ 2025–26ನೇ ಸಾಲಿನ ವರ್ಗಾವಣೆಗೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಮೊದಲ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ನಡೆಯಲಿದ್ದು, ನಂತರ ಶಿಕ್ಷಕರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಶೈಕ್ಷಣಿಕ ತಾಲ್ಲೂಕಿನ ಒಳಗೆ ವಲಯ ವರ್ಗಾವಣೆ ಶೇ 4, ಶೈಕ್ಷಣಿಕ ಜಿಲ್ಲೆಯ ಒಳಗೆ ಕೋರಿಕೆ ವರ್ಗಾವಣೆ ಶೇ 7, ವಿಭಾಗದ ಒಳಗೆ ಕೋರಿಕೆ ವರ್ಗಾವಣೆ ಶೇ 2 ಹಾಗೂ ವಿಭಾಗದ ಹೊರಗೆ ಕೋರಿಕೆ ವರ್ಗಾವಣೆ ಶೇ 2 ನಿಗದಿ ಮಾಡಲಾಗಿದೆ.
ಮೇ 29ರಿಂದಲೇ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಲಿದ್ದು, ಒಂದು ಸ್ಥಳದಲ್ಲಿ ಕನಿಷ್ಠ ಮೂರು ವರ್ಷ ಪೂರೈಸಿದವರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬಹುದು. ಆದರೆ, ಐದು ವರ್ಷ ಪೂರೈಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಜೂನ್ 6ರಂದು ಮಂಜೂರಾದ ಹುದ್ದೆಗಳ ವಿವರ ಪ್ರಕಟಿಸಲಾಗುತ್ತದೆ. ಜೂನ್ 19ರಂದು ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಯ ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. ನಂತರ ಜೂನ್ 21ರವರೆಗೆ ಘಟಕದ ಒಳಗೆ ಮತ್ತು ಹೊರಗೆ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು. ಜುಲೈ 2ರಿಂದ 4ರವರೆಗೆ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಯಲಿದೆ.
ಜಿಲ್ಲಾ ಹಂತದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಜುಲೈ 18ರಿಂದ 21ರವರೆಗೆ, ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್ ಜುಲೈ 22ರಿಂದ 23ರವರೆಗೆ, ಪರಸ್ಪರ ವರ್ಗಾವಣೆಯ ಕೌನ್ಸೆಲಿಂಗ್ ಜುಲೈ 24ರಂದು, ವಿಭಾಗೀಯ ವರ್ಗಾವಣೆ ಕೌನ್ಸೆಲಿಂಗ್ ಜುಲೈ 29ರಿಂದ ಆಗಸ್ಟ್ 7ರವರೆಗೆ, ಅಂತರ್ ವಿಭಾಗೀಯ ವರ್ಗಾವಣೆ ಕೌನ್ಸೆಲಿಂಗ್ ಆ.11ರಿಂದ 22ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.