ADVERTISEMENT

ಕೋವಿಡ್‌ ನಿಯಂತ್ರಿಸಲು ಇನ್ನಷ್ಟು ಕಠಿಣ ನಿರ್ಬಂಧ: ಇಂದು ಸಚಿವರ ಸಭೆಯಲ್ಲಿ ತೀರ್ಮಾನ

ಇಂದು ಸಚಿವರ ಸಭೆಯಲ್ಲಿ ತೀರ್ಮಾನ l ವಾರಾಂತ್ಯ ಲಾಕ್‌ಡೌನ್‌ ಬಗ್ಗೆಯೂ ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 18:57 IST
Last Updated 18 ಏಪ್ರಿಲ್ 2021, 18:57 IST
ಲಖನೌನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿರುವ ಆರೋಗ್ಯ ಕಾರ್ಯಕರ್ತರು (ಪಿಟಿಐ)
ಲಖನೌನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿರುವ ಆರೋಗ್ಯ ಕಾರ್ಯಕರ್ತರು (ಪಿಟಿಐ)   

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಇನ್ನಷ್ಟು ವೇಗ ಪಡೆದುಕೊಂಡಿರುವ ಬೆನ್ನಲ್ಲೇ ಸೋಂಕು ಹರಡುವಿಕೆ ತಡೆಗಟ್ಟಲು ಇನ್ನಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸುವ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಮಹತ್ವದ ಸಭೆಯನ್ನು ನಡೆಸಲಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ದೇಶನದ ಮೇರೆಗೆ ಕಂದಾಯ ಸಚಿವ ಆರ್‌.ಅಶೋಕ ನೇತೃತ್ವದಲ್ಲಿ ಈ ಸಭೆಯನ್ನು ಕರೆಯಲಾಗಿದ್ದು, ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಬೆಂಗಳೂರು ಪ್ರತಿನಿಧಿಸುವ ಸಚಿವರು, ಸಂಸದರು ಭಾಗವಹಿಸಲಿದ್ದಾರೆ. ವಾರಾಂತ್ಯದ ಲಾಕ್‌ಡೌನ್‌ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 24 ಗಂಟೆಯಲ್ಲಿ ಸುಮಾರು 19 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು ಅಲ್ಲದೆ, ಇತರ ಪ್ರಮುಖ ನಗರಗಳಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕ (ಆಕ್ಸಿಜನ್‌) ಪೂರೈಕೆಗೆ ಔಷಧ ನಿಯಂತ್ರಕರ ಕಚೇರಿಯಲ್ಲಿ ಭಾನುವಾರ ‘ವಾರ್‌ ರೂಮ್‌’ ಕೂಡ ರಚಿಸಲಾಗಿದೆ.

ADVERTISEMENT

ಬೆಂಗಳೂರಿನಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ತುರ್ತು ನಿಗಾ ಘಟಕ (ಐಸಿಯು) ಕೊರತೆಯೂ ಎದುರಾಗಿದೆ. ‘ಈ ಪರಿಸ್ಥಿತಿ ನಿಭಾಯಿಸಲು ಬಿಗಿ ಕ್ರಮ ಅನಿವಾರ್ಯ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

‘ಸೋಮವಾರದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿ ಜೊತೆ ಚರ್ಚಿಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ’ ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಸದ್ಯದ ಕೋವಿಡ್‌ ಪರಿಸ್ಥಿತಿ ಅವಲೋಕಿಸಲು ಗೃಹ ಸಚಿವ ಬಸರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ ಅವರು ಹಿರಿಯ ಅಧಿಕಾರಿಗಳ ಜತೆ ಭಾನುವಾರ ಚರ್ಚೆ ನಡೆಸಿದರು. ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ, ಮೃತರ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಿತು ಎಂದು ಸುಧಾಕರ್‌ ತಿಳಿಸಿದರು.

‘ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಆಮ್ಲಜನಕದ ಕೊರತೆ ಇಲ್ಲ. ಎಷ್ಟು ಐಸಿಯುಗಳು ಇವೆಯೋ ಅದಕ್ಕಿಂತ ಹೆಚ್ಚು ಪ್ರಕರಣಗಳು ಬಂದಾಗ ಐಸಿಯು ಕೊರತೆ ಆಗಿದೆ. ಪ್ರತಿನಿತ್ಯ ಐಸಿಯುಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಯತ್ನ ಮಾಡುತ್ತಿದ್ದೇವೆ' ಎಂದೂ ಹೇಳಿದರು.

‘ಕೋವಿಡ್ ರೋಗಿಗಳಿಗೆ ಶೇ 50 ಹಾಸಿಗೆ ಮೀಸಲಿಡುವ ಆದೇಶವನ್ನು ಯಾರೆಲ್ಲ ಪಾಲಿಸಿದ್ದಾರೆ ಎಂದು ಪರಿಶೀಲಿಸಲಾಗುತ್ತಿದೆ. ಮಣಿಪಾಲ ಆಸ್ಪತ್ರೆಯವರು ಶೇ 50 ಹಾಸಿಗೆ ನೀಡಿಲ್ಲ. ಹೀಗಾಗಿ, ಆ ಆಸ್ಪತ್ರೆಯವರಿಗೆ ತೀಕ್ಷ್ಣ
ವಾಗಿ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡುವ ವಿಚಾರದಲ್ಲಿ ನನಗೆ ಸಮಾ
ಧಾನ ಆಗಿಲ್ಲ. ಕೆಲವು ದೊಡ್ಡ ಆಸ್ಪತ್ರೆಗಳು ಕೂಡ ಹಾಸಿಗೆ ನೀಡಿಲ್ಲ. ಖಾಸಗಿ ಆಸ್ಪತ್ರೆಯವರು ಸರ್ಕಾರದ ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಆಮ್ಲಜನಕ ಲಭ್ಯತೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವಲಯವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈಗ ಇರುವ 800 ಟನ್ ಆಮ್ಲಜನಕ ಜೊತೆಗೆ 300 ಟನ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಗತ್ಯವಿರುವಷ್ಟು ಆಮ್ಲಜನಕ ನೀಡಲಾಗುವುದು ಎಂದು ಕೈಗಾರಿಕಾ ವಲಯದವರು ಕೂಡ ಹೇಳಿದ್ದಾರೆ’ ಎಂದು ವಿವರಿಸಿದರು.

ರಾಜ್ಯಪಾಲರಿಗೆ ಮಾಹಿತಿ

ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಇ.ವಿ. ರಮಣರೆಡ್ಡಿ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮಾಹಿತಿ ನೀಡಿದರು.

ಕೊರೊನಾ ಸೋಂಕಿತರಿಗೆ ಆಮ್ಲಜನಕ ಪೂರೈಕೆ, ಔಷಧ ಹಾಗೂ ಹಾಸಿಗೆ ವ್ಯವಸ್ಥೆಯನ್ನು ಯಾವುದೇ ಲೋಪವಿಲ್ಲದಂತೆ ಕಲ್ಪಿಸಲು ಅಧಿಕಾರಿಗಳಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ರಾಜ್ಯಪಾಲರನ್ನು ಶನಿವಾರ ಭೇಟಿ ಮಾಡಿದ್ದರು.

ರೆಮ್‌ಡಿಸಿವಿರ್ ಅಕ್ರಮ ಮಾರಾಟ: ಮೂವರ ಬಂಧನ

ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ ಸಂಗ್ರಹಿಸಿ ₹10,500 ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಔಷಧ ಮಳಿಗೆ ಮಾಲೀಕರಿಬ್ಬರು ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರಾಜೇಶ್, ಶಾಕೀಬ್ ಹಾಗೂ ಸುಹೇಲ್ ಬಂಧಿತರು. ಅವರಿಂದ 11 ಚುಚ್ಚುಮದ್ದು ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಮೂವರ ವಿರುದ್ಧವೂ ಸುದ್ದಗುಂಟೆಪಾಳ್ಯ ಹಾಗೂ ಮಡಿವಾಳ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳಾದ ರಾಜೇಶ್ ಹಾಗೂ ಶಾಕೀಬ್, ಸುದ್ದಗುಂಟೆಪಾಳ್ಯ ಬಳಿ ‘ಗುರುಶ್ರೀ ಮೆಡಿಕಲ್ಸ್’ ಹೆಸರಿನಲ್ಲಿ ಔಷಧಿ ಮಳಿಗೆ ಇಟ್ಟುಕೊಂಡಿದ್ದರು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.