ADVERTISEMENT

ಶರಾವತಿ ಪಂಪ್ಡ್‌ ಸ್ಟೋರೇಜ್‌: ಕೇಂದ್ರದ ನಿರ್ದೇಶನ ಒಪ್ಪದ ರಾಜ್ಯ

ಸುರಂಗ ರಸ್ತೆ ನಿರ್ಮಾಣಕ್ಕಿಂತ ರಸ್ತೆ ವಿಸ್ತರಣೆಯೇ ವಿವೇಕಯುತ: ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 16:02 IST
Last Updated 24 ಡಿಸೆಂಬರ್ 2025, 16:02 IST
ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯ ಗೂಗಲ್ ನಕ್ಷೆ 
ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯ ಗೂಗಲ್ ನಕ್ಷೆ    

ನವದೆಹಲಿ: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಅರಣ್ಯ ನಾಶ ಕಡಿಮೆ ಮಾಡಲು ಸುರಂಗ ರಸ್ತೆ ನಿರ್ಮಿಸಬೇಕು ಎಂದು ಕೇಂದ್ರ ಅರಣ್ಯ ಸಚಿವಾಲಯದ ಸಲಹಾ ಸಮಿತಿ ಮಾಡಿದ್ದ ಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆ ಒಪ್ಪಿಲ್ಲ. ಸುರಂಗ ರಸ್ತೆ ನಿರ್ಮಾಣದಿಂದ ಅಧಿಕ ಪ್ರಮಾಣದ ಅರಣ್ಯ ನಾಶವಾಗಲಿದೆ ಎಂದೂ ಸ್ಪಷ್ಟಪಡಿಸಿದೆ. 

‘ಯೋಜನೆಯ ಕಾಮಗಾರಿಗಾಗಿ ಈಗಿರುವ 9.2 ಕಿ.ಮೀ. ರಸ್ತೆಯನ್ನು 3.5 ಮೀ. ನಿಂದ 5.5 ಮೀ.ಗೆ  ಅಗಲ ಮಾಡಲಾಗುತ್ತದೆ. ಈ ರಸ್ತೆಯು ಮೂರು ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಮರಗಳನ್ನಷ್ಟೇ ಕಡಿಯಬೇಕು ಎಂದು ರಾಜ್ಯ ವನ್ಯಜೀವಿ ಮಂಡಳಿ ನಿರ್ದೇಶನ ನೀಡಿದೆ. ಆದರೂ, ರಾಜ್ಯ ಸರ್ಕಾರವು ಪರ್ಯಾಯ ರಸ್ತೆ ನಿರ್ಮಾಣದ ಸಾಧ್ಯತೆಗಳನ್ನು ಅನ್ವೇಷಿಸಬೇಕು ಹಾಗೂ ಸ್ಪಷ್ಟ ಶಿಫಾರಸುಗಳೊಂದಿಗೆ ಸಮಗ್ರ ಉತ್ತರ ಸಲ್ಲಿಸಬೇಕು ಎಂದು ಅರಣ್ಯ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಅಕ್ಟೋಬರ್‌ 27ರಂದು ನಿರ್ದೇಶನ ನೀಡಿತ್ತು.

ಇದಕ್ಕೆ ಇದೇ 23ರಂದು ‘ಸಮಗ್ರ’ ಉತ್ತರ ನೀಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ), ‘ಸುರಂಗ ಮಾರ್ಗಕ್ಕಿಂತ ಈಗಿರುವ ರಸ್ತೆಯನ್ನು ಅಗಲ ಮಾಡುವುದೇ ವಿವೇಕಯುತ. ಅರಣ್ಯ ಮತ್ತು ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರುವ ಅತ್ಯಂತ ಸೂಕ್ತವಾದ ಆಯ್ಕೆಯೆಂಬುದನ್ನು ಪರಿಗಣಿಸಿ, ನಾಗರಬಸ್ತಿಕರೆಯಿಂದ ಬೇಗೋಡಿಯವರೆಗಿನ ರಸ್ತೆಯನ್ನು ಅಗಲಗೊಳಿಸುವುದೇ ಸೂಕ್ತ. ಇದಕ್ಕೆ ಅರಣ್ಯ ಸಲಹಾ ಸಮಿತಿ ಅನುಮೋದನೆ ನೀಡಬೇಕು’ ಎಂದು ಕೋರಿದ್ದಾರೆ. 

ADVERTISEMENT

‘ಸಲಹಾ ಸಮಿತಿಯ ನಿರ್ದೇಶನದ ಬಳಿಕ ಇಂಧನ ಇಲಾಖೆಯು ಸುರಂಗ ರಸ್ತೆ ನಿರ್ಮಾಣದ ಪ್ರಸ್ತಾವ ಸಿದ್ಧಪಡಿಸಿತ್ತು. ಇದರ ಪರಾಮರ್ಶೆಗೆ ತಜ್ಞರ ಸಮಿತಿ ರಚಿಸಲಾಗಿತ್ತು. ಇಂಧನ ಇಲಾಖೆ ಶಿಫಾರಸು ಮಾಡಿರುವ ಸುರಂಗ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದ ಅರಣ್ಯ ಬೇಕು. ಜತೆಗೆ, ಕನಿಷ್ಠ 2 ವರ್ಷ ಹೆಚ್ಚುವರಿ ಸಮಯಾವಕಾಶ ಬೇಕಾಗುತ್ತದೆ. ಇದರಿಂದ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬ ಆಗುತ್ತದೆ. ಆ ಬಳಿಕ ತಜ್ಞರ ಸಮಿತಿಯು ಪರ್ಯಾಯವಾಗಿ ಎರಡು ಸುರಂಗ ಮಾರ್ಗಗಳ ಶಿಫಾರಸು ಮಾಡಿತ್ತು. ಇದಕ್ಕೂ ಹೆಚ್ಚುವರಿ ಅರಣ್ಯ ಬೇಕಾಗುತ್ತದೆ’ ಎಂದು ಪಿಸಿಸಿಎಫ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಈಗಿರುವ ರಸ್ತೆಯ ಅಗಲೀಕರಣಕ್ಕೆ ಕನಿಷ್ಠ ಪ್ರಮಾಣದ ಅರಣ್ಯ ಪ್ರದೇಶ ಸಾಕು. ರಸ್ತೆಗೆ ಅಡ್ಡಿಯಾಗಿರುವ ಮರಗಳನ್ನಷ್ಟೇ ಕಡಿದರೆ ಸಾಕು. ಆದರೆ, ಪ್ರಸ್ತಾಪಿಸಿರುವ ಮೂರು ಸುರಂಗಗಳು ದಟ್ಟ ಕಾಡಿನ ಮೂಲಕ ಹಾದು ಹೋಗುತ್ತದೆ. ಇದು ಕಾರ್ಯಸಾಧು ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.