ADVERTISEMENT

ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ಇಲ್ಲ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:30 IST
Last Updated 5 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಈ ಬಾರಿಯೂ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್, ಶೂ, ಸಾಕ್ಸ್‌ ವಿತರಣೆ ಇಲ್ಲ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡದೇ ಇರುವುದರಿಂದ ಈ ಯೋಜನೆಗಳನ್ನು ಕೈ ಬಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‌, 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲಾಗುತ್ತಿತ್ತು. ಸೈಕಲ್‌ ವಿತರಣೆಯನ್ನು 2019–20ರಿಂದಲೇ ನಿಲ್ಲಿಸಲಾಗಿದೆ. ಆದರೆ, ಈ ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ (2020–21, 2021–22)ಶೂ, ಸಾಕ್ಸ್ ವಿತರಿಸಿಲ್ಲ.

ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10ರವರೆಗಿನ ತರಗತಿಗಳಲ್ಲಿ ಕಲಿಯುವ ಸುಮಾರು 50 ಲಕ್ಷ ಮಕ್ಕಳು ಶೂ, ಸಾಕ್ಸ್‌ನಿಂದ ವಂಚಿತರಾದರೆ, ಎಂಟನೇ ತರಗತಿಯಲ್ಲಿ ಓದುತ್ತಿರುವ ಸುಮಾರು 6.15 ಲಕ್ಷ ಮಕ್ಕಳಿಗೆ ‘ಸೈಕಲ್‌ ಭಾಗ್ಯ’ ಇಲ್ಲವಾಗಿದೆ.‌

ADVERTISEMENT

‘ಶೂ, ಸಾಕ್ಸ್‌ ಯೋಜನೆಗೆ ಪ್ರತಿವರ್ಷ ಸುಮಾರು ₹ 140 ಕೋಟಿ ವೆಚ್ಚ ತಗಲುತ್ತಿತ್ತು. ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣ ನಿಗದಿಪಡಿಸದೇ ಇರುವುದರಿಂದ ಈ ಸಾಲಿನಲ್ಲೂ (2022–23) ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆಶೂ, ಸಾಕ್ಸ್‌ ವಿತರಿಸದಿರಲು ನಿರ್ಧರಿಸಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಮತ್ತು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗೆ ತಲಾ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ 2016ರಲ್ಲಿ ಆರಂಭಿಸಿತ್ತು.

‘2019–20ನೇ ಸಾಲಿನಲ್ಲಿ ಕೊನೆಯದಾಗಿ ಈ ಯೋಜನೆಯಡಿ ಅನುದಾನ ಬಿಡುಗಡೆ ಆಗಿತ್ತು. ಹೀಗಾಗಿ, ಆ ವರ್ಷ ಶೂ, ಸಾಕ್ಸ್‌ ವಿತರಿಸಲಾಗಿದೆ. ಆದರೆ, ನಂತರ ಎರಡು ವರ್ಷ (2020–21, 2021–22) ಹಣ ಮೀಸಲಿಡದ ಕಾರಣ ವಿತರಣೆ ನಡೆದಿಲ್ಲ. ಕೋವಿಡ್‌ ಕಾರಣದಿಂದ ಆ ಎರಡೂ ವರ್ಷ ಶಾಲೆಗಳು ಕಾರ್ಯನಿರ್ವಹಿಸಿಲ್ಲ. ಈ ಬಾರಿ ಕೂಡಾ ಆರ್ಥಿಕ ಇಲಾಖೆ ಹಣ ನೀಡಿಲ್ಲ. ಹೀಗಾಗಿ ಯೋಜನೆಯನ್ನು ಕೈಬಿಡಲಾಗಿದೆ. 2019–20ರಲ್ಲಿ 1ರಿಂದ 5ನೇ ತರಗತಿಗೆ ₹ 265, 6ರಿಂದ 8ನೇ ತರಗತಿಗೆ ₹ 295, 9 ಮತ್ತು 10ನೇ ತರಗತಿಯ ಮಕ್ಕಳಿಗೆ ₹ 325ರಂತೆ ಶೂ ವೆಚ್ಚವನ್ನು ಸರ್ಕಾರ ಭರಿಸುತ್ತಿತ್ತು’ ಎಂದೂ ಅಧಿಕಾರಿ ಹೇಳಿದರು.

‘ಉಚಿತ ಸೈಕಲ್‌ ವಿತರಣೆ ಯೋಜನೆಯನ್ನು ರಾಜ್ಯ ಸರ್ಕಾರ 2006–07ನಲ್ಲಿ ಆರಂಭಿಸಿತ್ತು. ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆಯಲು ಈ ಯೋಜನೆಯನ್ನು ಪರಿಚಯಿಸಲಾಗಿತ್ತು. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ನಂತರ ವರ್ಷಗಳಲ್ಲಿ ನಡೆಯುತ್ತಾ ಬಂದಿತ್ತು. ಆದರೆ, ಕೆಲವು ವರ್ಷಗಳಲ್ಲಿ ಟೆಂಡರ್‌ ಪ್ರಕ್ರಿಯೆ ವಿಳಂಬದ ಕಾರಣಕ್ಕೆ ಶೈಕ್ಷಣಿಕ ಸಾಲಿನ ಅರ್ಧ ಅವಧಿ ಮುಗಿದ ಬಳಿಕ ಮಕ್ಕಳಿಗೆ ತಲುಪುತ್ತಿತ್ತು. 2018-19ರಲ್ಲಿ ಪ್ರತಿ ಬಾಲಕರಿಗೆ ತಲಾ ₹ 3,457, ಬಾಲಕಿಯರಿಗೆ ತಲಾ ₹ 3,674 ವೆಚ್ಚದಲ್ಲಿ ಸೈಕಲ್‌ ವಿತರಿಸಲಾಗಿತ್ತು’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.